ದೇಶ

ಪೆಹ್ಲು ಖಾನ್ ಸಾಮೂಹಿಕ ಹತ್ಯೆ ಪ್ರಕರಣ: ಇಬ್ಬರು ಅಪ್ರಾಪ್ತರು ತಪ್ಪಿತಸ್ಥರು ಎಂದ ಕೋರ್ಟ್

Srinivasamurthy VN

ಜೈಪುರ: ಕಸಾಯಿಖಾನೆಗೆ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಎಂದು ಆರೋಪಿಸಿ ಪೆಹ್ಲುಖಾನ್ ಎಂಬಾತನನ್ನು ಸಾರ್ವಜನಿಕವಾಗಿ ಥಳಿಸಿ ಹತ್ಯೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜಸ್ತಾನದ ಬಾಲನ್ಯಾಯ ಮಂಡಳಿ ಇಬ್ಬರು ಅಪ್ರಾಪ್ತರನ್ನು ದೋಷಿಗಳು ಎಂದು ತೀರ್ಪು ನೀಡಿದೆ.

ಮೂರು ವರ್ಷಗಳ ಹಿಂದೆ ರಾಜಸ್ತಾನದ ಆಳ್ವಾರ್ ಜಿಲ್ಲೆಯ ಬೆಹ್ರೂರ್ ಬಳಿ ಅಕ್ರಮ ಗೋಸಾಗಾಟ ಆರೋಪದಲ್ಲಿ ಹರ್ಯಾಣದ ಹೈನುಗಾರ ಪೆಹ್ಲು ಖಾನ್(55 ವರ್ಷ) ಅವರನ್ನು ಥಳಿಸಿ ಹತ್ಯೆಗೈಯ್ಯಲಾಗಿತ್ತು.  2017,ಎಪ್ರಿಲ್ 1ರಂದು ಜೈಪುರದ ಸಾಪ್ತಾಹಿಕ ಜಾನುವಾರು ಸಂತೆಯಲ್ಲಿ ಹೈನುಗಾರಿಕೆಗಾಗಿ ದನಗಳನ್ನು ಖರೀದಿಸಿದ್ದ ಖಾನ್ ಅವುಗಳನ್ನು ತನ್ನಿಬ್ಬರು ಪುತ್ರರೊಂದಿಗೆ ಸ್ವಗ್ರಾಮ ಹರ್ಯಾಣದ ನುಹ್‌ಗೆ ಸಾಗಿಸುತ್ತಿದ್ದಾಗ ಬೆಹರೂರ್ ಬಳಿ ವಾಹನವನ್ನು ಅಡ್ಡಗಟ್ಟಿದ್ದ ತಥಾಕಥಿತ ಗೋರಕ್ಷಕರ ಗುಂಪು ದನಗಳ ಕಳ್ಳ ಸಾಗಾಣಿಕೆಯ ಆರೋಪದಲ್ಲಿ ಹಲ್ಲೆ ನಡೆಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಖಾನ್ ಎ.3ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಇಬ್ಬರು ಹದಿಹರೆಯದ ಬಾಲಕರು ತಪ್ಪಿತಸ್ಥರು ಎಂದು ಆಳ್ವಾರ್‌ನ ಬಾಲನ್ಯಾಯ ಮಂಡಳಿ (ಜೆಜೆಬಿ)ಯು ಇಂದು ತೀರ್ಪು ನೀಡಿದೆ.

ಇನ್ನು ಇದೇ ಪ್ರಕರಣದಲ್ಲಿ 16 ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಇನ್ನೋರ್ವ ಆರೋಪಿಯು ಬೇರೊಂದು ನ್ಯಾಯಾಲಯದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾನೆ. ಆಳ್ವಾರ್ ಜೆಜೆಬಿ 16ಕ್ಕಿಂತ ಕಡಿಮೆ ಪ್ರಾಯದವರ ವಿಚಾರಣೆ ನಡೆಸುತ್ತದೆ.

SCROLL FOR NEXT