ದೇಶ

ಕೊರೋನಾವೈರಸ್: ಪುಣೆಯಲ್ಲಿ ಇನ್ನೆರಡು ಪಾಸಿಟಿವ್,ದೇಶದಲ್ಲಿ ಒಟ್ಟು 58 ಪ್ರಕರಣಗಳು ಪತ್ತೆ

Nagaraja AB

ನವದೆಹಲಿ: ವಿಶ್ವದಾದ್ಯಂತ ಭೀತಿ ಸೃಷ್ಟಿಸಿರುವ ಮಾರಕ ಕೊರೋನಾ ವೈರಸ್ ಸೋಂಕು ಭಾರತದಲ್ಲೂ ಹಬ್ಬುತ್ತಿದ್ದು, ಇಂದು ಕರ್ನಾಟಕದಲ್ಲಿ ನಾಲ್ಕು, ಪುಣೆಯಲ್ಲಿ ಇನ್ನೆರಡು ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ ಈ ಸೋಂಕು ತಗುಲಿದವರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ. 

ಇನ್ನೆರಡು ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಪುಣೆಯಲ್ಲಿ ನಾಲ್ಕು ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಕರ್ನಾಟಕದಲ್ಲಿ ಕೊರೋನಾ ಸೋಂಕು ಪರೀಕ್ಷೆಗಾಗಿ ಕಳುಹಿಸಲಾಗಿದ್ದ 446 ರಕ್ತದ ಮಾದರಿಗಳಲ್ಲಿ  4 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 389  ಮಾದರಿಗಳು ನಗೆಟಿವ್ ಆಗಿವೆ. ಈವರೆಗೂ 1048 ಮಂದಿಯನ್ನು ಅಬ್ಸರ್ವೇಷನ್ ಗಾಗಿ ಗುರುತಿಸಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. 

ಕೇರಳದಲ್ಲಿ ಹೊಸ ಆರು ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿದೆ. ಬಸ್ ಚಾಲಕರು ಹಾಗೂ ನಿರ್ವಾಹಕರಿಗೆ ಮಾರ್ಗದರ್ಶಿ ಸೂತ್ರಗಳನ್ನು ಮೋಟಾರ್  ವಾಹನ ಇಲಾಖೆ ಹೊರಡಿಸಿದೆ. 

ಈ ಮಧ್ಯೆ ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಕೊಚ್ಚಿಯ ಅಮ್ಯೂಸ್ ಮೆಂಟ್ ಪಾರ್ಕ್ ನ್ನು ಮಾರ್ಚ್ 11ರಿಂದ 20ರವರೆಗೂ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕೊರೋನಾ ವೈರಸ್ ಶಂಕೆ ಹಿನ್ನೆಯಲ್ಲಿ ಮಹಾರಾಷ್ಟ್ರದ ನಾಸಿಕ್ ನಲ್ಲಿನ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ ನಲ್ಲಿ 54 ವರ್ಷದ ತಾಯಿ ಹಾಗೂ 23 ವರ್ಷದ ಆಕೆಯ ಮಗಳನ್ನು ದಾಖಲಿಸಲಾಗಿದೆ. ಮಹಾರಾಷ್ಟ್ರದಲ್ಲಿ ಈ ಸೋಂಕು ಪೀಡಿತರ ಸಂಖ್ಯೆ ಐದಕ್ಕೆ ಏರಿಕೆ ಆಗಿದೆ. 

ಈ ಮಧ್ಯೆ ಕೊರೋನಾ ವೈರಸ್ ಪೀಡಿತ ಇರಾನ್ ನಿಂದ 58 ಭಾರತೀಯರನ್ನು ಭಾರತೀಯ ವಾಯುಪಡೆಯ ಮಿಲಿಟರಿ ವಿಮಾನವೊಂದು ಸ್ವದೇಶಕ್ಕೆ ಕರೆತಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿ-17 ಗ್ಲೋಬ್ ಮಾಸ್ಟರ್ ವಿಮಾನವನ್ನು ಸೋಮವಾರ ಸಂಜೆ ತೆಹ್ರಾನ್ ಗೆ ಕಳುಹಿಸಲಾಗಿತ್ತು. 

ಇರಾನ್ ನಲ್ಲಿ ಸುಮಾರು 2 ಸಾವಿರ ಭಾರತೀಯರು ವಾಸಿಸುತ್ತಿದ್ದಾರೆ. ಕಳೆದ ಕೆಲ ದಿನಗಳಲ್ಲಿ ದೇಶದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ವಾಯುಪಡೆ ವಿಮಾನ ಬಂದಿದ್ದು, ಕಾರ್ಯಾಚರಣೆ ಮುಕ್ತಾಯವಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ. 

ಗಾಜಿಯಾಬಾದ್ ನ ಹಿಂಡನ್ ವಾಯುನೆಲೆಯಲ್ಲಿ ಈ ವಿಮಾನ ಬಂದಿಳಿದಿದ್ದು,ಪ್ರಯಾಣಿಕರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಇಟಲಿಯ ಪ್ರವಾಸವನ್ನು ನಿಷೇಧಿಸಿದ ಬಳಿಕ ಈ ಬೆಳವಣಿಗೆಯಾಗಿದೆ. 

ಸಾಂಕ್ರಾಮಿಕ ರೋಗ ನಿಜವಾಗಿಯೂ ಭೀತಿಯನ್ನು ಸೃಷ್ಟಿಸುತ್ತಿದ್ದು, ಈ ವೈರಸ್ ಗೆ ಕರುಣೆ ತೋರುತ್ತಿಲ್ಲ, ಇದು ನಿಯಂತ್ರಿಸಬಹುದಾದ ಸಾಂಕ್ರಾಮಿಕ ರೋಗವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ. 

SCROLL FOR NEXT