ದೇಶ

ಅಮಿತ್ ಶಾ ಅಲ್ಲ, ಸಿಂಧಿಯಾ-ಮೋದಿ ಸಂಪರ್ಕ, ಬಿಜೆಪಿ ಸೇರ್ಪಡೆ ಹಿಂದಿರೋ ಮಾಸ್ಟರ್ ಮೈಂಡ್ ಯಾರು ಗೊತ್ತೆ? 

Srinivas Rao BV

ನವದೆಹಲಿ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನದ ಅಂಚಿಗೆ ಸಾಗಿ, ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆಯುವುದಕ್ಕೆ ಕಾರಣವಾದ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆ ಬಗ್ಗೆ ಹಲವು ಕುತೂಹಲಕಾರಿ ಮಾಹಿತಿಗಳು ಬಹಿರಂಗವಾಗುತ್ತಿವೆ. 

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಬಗ್ಗೆ ಬೇಸತ್ತಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಕ್ಕೆ ಖುದ್ದು ಗೃಹ ಸಚಿವ ಅಮಿತ್ ಶಾ ಅವರೇ ನೇತೃತ್ವ ವಹಿಸಿದ್ದರು. ಪ್ರಧಾನಿ ಮೋದಿ ನಿವಾಸಕ್ಕೆ ಅಮಿತ್ ಶಾ ಅವರೇ ಸಿಂಧಿಯಾ ಅವರನ್ನು ಕರೆದೊಯ್ದು ಮಾತನಾಡಿಸಿದ್ದರು ಎಂಬ ವರದಿಗಳು ಪ್ರಕಟವಾಗಿದ್ದವು. ಆದರೆ ಅಮಿತ್ ಶಾ ಅವರಿಗಿಂತಲೂ ಮುನ್ನ ಸಿಂಧಿಯಾ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವ ಸಂಬಂಧ ಯೋಜನೆ ರೂಪಿಸಿದ್ದ ಮಾಸ್ಟರ್ ಮೈಂಡ್ ಬಗ್ಗೆ ಈಗ ಹೊಸ ಮಾಹಿತಿಯೊಂದು ಬಹಿರಂಗವಾಗಿದೆ. 

ಬಿಜೆಪಿ-ಜ್ಯೋತಿರಾದಿತ್ಯ ಸಿಂಧಿಯಾ ನಡುವೆ ಸಂಪರ್ಕ ಸೇತುವಾಗಿದ್ದು, ಬರೋಡಾದ ರಾಜಮನೆತನದ ಶುಭಾಂಗಿನಿ ರಾಜೇ ಗಾಯಕ್ವಾಡ್!   

ಜ್ಯೋತಿರಾದಿತ್ಯ ಸಿಂಧಿಯಾ ಅವರ ಪತ್ನಿ ಪ್ರಿಯದರ್ಶಿನಿ ಸಿಂಧಿಯಾ ಬರೋಡಾದ ಗಾಯಕ್ವಾಡ್ ರಾಜಮನೆತನದವರು ಎಂಬುದು ಗಮನಾರ್ಹ ಕಾಂಗ್ರೆಸ್ ನ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ- ಜ್ಯೋತಿರಾದಿತ್ಯ ಸಿಂಧಿಯಾ ನಡುವೆ ಶೀತಲ ಸಮರ ಪ್ರಾರಂಭವಾಗುತ್ತಿದ್ದಂತೆಯೇ ಸಿಂಧಿಯಾ ಕುಟುಂಬ ಕಾಂಗ್ರೆಸ್ ನ ಹೊರತಾದ ಆಯ್ಕೆಗಳನ್ನು ಎದುರುನೋಡುತ್ತಿದ್ದರು. ಇತ್ತ ಬರೋಡಾ ಮಹಾರಾಣಿ (ಶುಭಾಂಗಿನಿ ರಾಜೇ) ಹಾಗೂ ಬರೋಡಾ ರಾಜಮನೆತನದ ಬಗ್ಗೆ ಅಪಾರ ಗೌರವ ಹೊಂದಿರುವ ಪ್ರಧಾನಿ ಮೋದಿ ಜೊತೆ ಸಿಂಧಿಯಾ ಮುಂದಿನ ರಾಜಕೀಯ ನಡೆ ಕುರಿತು ಮಾತುಕತೆಯೂ ಪ್ರಾರಂಭವಾಗಿತ್ತು.

ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವೆ ಬರೋಡಾ ರಾಜಮನೆತನದ ಶುಭಾಂಗಿನಿ ರಾಜೇ ಸಂಪರ್ಕ ಸೇತುವಾಗಿ ನಿಂತರು ಪರಿಣಾಮ ಸಿಂಧಿಯಾ ಬಿಜೆಪಿ ಸೇರ್ಪಡೆಯ ಹಾದಿ ಸುಗಮವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ. 

2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ರಾಜಪರಿವಾರದ ಶುಭಾಂಗಿನಿ ರಾಜೇ ಗಾಯಕ್‌ವಾಡ್‌ ಅವರೇ ಸೂಚಕರಾಗಿದ್ದದ್ದು ಎಂಬುದು ಮತ್ತೊಂದು ಗಮನಾರ್ಹ ಸಂಗತಿ

SCROLL FOR NEXT