ದೇಶ

ಕೊರೋನಾ ವೈರಸ್: ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ, ಎಸ್ ಡಿಆರ್ ಎಫ್ ನಿಧಿ ಬಳಸಿಕೊಳ್ಳಲು ರಾಜ್ಯಗಳಿಗೆ ಕೇಂದ್ರ ಸೂಚನೆ

Lingaraj Badiger

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ನಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿರುವ ಕೇಂದ್ರ ಸರ್ಕಾರ, ಪರಿಹಾರ ಹಾಗೂ ಸೋಂಕಿತರ ಚಿಕಿತ್ಸಾ ವೆಚ್ಚವನ್ನು ರಾಜ್ಯ ವಿಪತ್ತು ನಿರ್ವಹಣಾ ನಿಧಿ(ಎಸ್ ಡಿಆರ್ ಎಫ್)ಯಿಂದ ಭರಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಕೊರೋನಾ ವೈರಸ್ ಹರಡದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ರಾಜ್ಯಗಳಿಗೆ ಕೆಲ ನಿರ್ದೇಶನ ನೀಡಿರುವ ಕೇಂದ್ರ ಸರ್ಕಾರ, ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಇನ್ನು ಸೋಂಕಿತರ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರಗಳೇ ಭರಿಸಬೇಕು, ಪೊಲೀಸರು, ವೈದ್ಯರು, ಕಾರ್ಪೋರೇಶನ್, ಅಗ್ನಿಶಾಮಕ ಸಿಬ್ಬಂದಿಗಳಿಗೆ ಪಿಪಿ ಕಿಟ್ (ಸ್ವಯಂರಕ್ಷಣಾ ಕವಚ) ನೀಡುವಂತೆ ಸೂಚಿಸಿದೆ.

30 ದಿನದೊಳಗೆ ಸೋಂಕಿತರ ನಿಗಾ ಕೇಂದ್ರಗಳನ್ನು ತೆರೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸ್ಕ್ರೀನಿಂಗ್ ಬಗ್ಗೆ ರಾಜ್ಯ ಕಾರ್ಯಕಾರಿ ಸಮಿತಿ ನಿರ್ಧಾರ ಕೈಗೊಳ್ಳಲಿ. ಕೊರೋನಾ ಸೋಂಕು ಪತ್ತೆ ಹಚ್ಚಲು ಹೆಚ್ಚುವರಿ ಲ್ಯಾಬ್ ತೆರೆಯುವುದು, ಥರ್ಮಲ್ ಸ್ಕ್ಯಾನರ್, ಗಾಳಿ ಶುದ್ದೀಕರಣ ಯಂತ್ರ, ವೆಂಟಿಲೇಟರ್ ಯಂತ್ರಗಳನ್ನು ಖರೀದಿಸಲು ಎಸ್ ಡಿಆರ್ ಎಫ್ ನಿಧಿಯನ್ನೇ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಸೂಚಿಸಿದೆ.

ನಿನ್ನೆ ರಾತ್ರಿ ದೆಹಲಿಯ ಜನಕಪುರಿಯಲ್ಲಿ 68 ವರ್ಷದ ಮಹಿಳೆ ಕೊರೋನಾ ವೈರಸ್ ನಿಂದ ಸಾವನ್ನಪ್ಪಿದ್ದು, ಇದರೊಂದಿಗೆ ದೇಶದಲ್ಲಿ ಕೊರೋನಾವೈರಸ್ ನಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿದೆ. ದೆಹಲಿಯ ಆಸ್ಪತ್ರೆಯಲ್ಲಿ ಕೊರೋನಾವೈರಸ್ ಬಾಧಿತ ಮಹಿಳೆ ಮೃತಪಟ್ಟಿದ್ದಾರೆ. 

ಇಂದು ತೆಲಂಗಾಣದಲ್ಲಿ ಮತ್ತೊಂದು ಕೊರೋನಾ ವೈರಸ್ ದೃಢಪಟ್ಟಿದ್ದು, ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 89 ಕ್ಕೆ ಏರಿದೆ.

SCROLL FOR NEXT