ದೇಶ

ಮಧ್ಯ ಪ್ರದೇಶ ರಾಜಕೀಯ ಬಿಕ್ಕಟ್ಟು: ನಾಳೆ ಸದನದಲ್ಲಿ ಕಮಲ್ ನಾಥ್ ಗೆ ಅಗ್ನಿ ಪರೀಕ್ಷೆ, ಬಹುಮತ ಸಾಬೀತಿಗೆ ಆದೇಶ 

Sumana Upadhyaya

ಭೋಪಾಲ್:ಮಧ್ಯ ಪ್ರದೇಶ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪ್ರಕ್ರಿಯೆ ನಾಳೆ ನಡೆಯಲಿದೆ ಎಂದು ರಾಜ್ಯಪಾಲ ಲಾಲ್ಜಿ ಟಂಡನ್ ತಿಳಿಸಿದ್ದಾರೆ.


ಮಧ್ಯಪ್ರದೇಶದ ಕಮಲ್ ನಾಥ್ ನೇತೃತ್ವದ ಸರ್ಕಾರದಿಂದ ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ 22 ಶಾಸಕರು ಬಂಡಾಯವೆದ್ದು ರಾಜೀನಾಮೆ ನೀಡಿದ ನಂತರ ವಿಧಾನಸಭೆಯಲ್ಲಿ ಸದಸ್ಯರ ಸಂಖ್ಯಾಬಲ ಕಡಿಮೆಯಾಗಿದೆ. ಹೀಗಾಗಿ ಬಹುಮತ ಸಾಬೀತುಪಡಿಸಲು ಆದೇಶ ನೀಡಬೇಕೆಂದು ನಿನ್ನೆ ಬಿಜೆಪಿ ನಿಯೋಗ ರಾಜ್ಯಪಾಲ ಲಾಲ್ಜಿ ಟಂಡನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. 


''ನಮ್ಮ ಪಕ್ಷದ ನಿಯೋಗ ನಿನ್ನೆ 22 ಮಂದಿ ಕಾಂಗ್ರೆಸ್ ಶಾಸಕರ ಸಮೇತ ರಾಜ್ಯಪಾಲರನ್ನು ಭೇಟಿ ಮಾಡಿದ್ದೆವು. ಕಮಲ್ ನಾಥ್ ನೇತೃತ್ವದ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು ಬಜೆಟ್ ಅಧಿವೇಶನಕ್ಕೆ ಮುನ್ನ ಸದನ ಪರೀಕ್ಷೆಗೆ ಆದೇಶ ನೀಡಬೇಕು ರಾಜ್ಯಪಾಲರನ್ನು ಒತ್ತಾಯಿಸಿದೆವು'' ಎಂದು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.


ಕಮಲ್ ನಾಥ್ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಸರ್ಕಾರವನ್ನು ಮುನ್ನಡೆಸಲು ಯಾವುದೇ ಸಾಂವಿಧಾನಿಕ ಹಕ್ಕು ಮತ್ತು ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರ ಕೂಡ ಇಲ್ಲ. ಹೀಗಾಗಿ ಸದನದಲ್ಲಿ ಮೊದಲು ಬಹುಮತ ಸಾಬೀತುಪಡಿಸಬೇಕು ಎಂದು ಹೇಳಿದರು.


ಕಳೆದ ಮಾರ್ಚ್ 10ರಂದು 6 ಸಚಿವರು ಸೇರಿದಂತೆ 22 ಕಾಂಗ್ರೆಸ್ ಶಾಸಕರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. 2018ರಲ್ಲಿ ಸರ್ಕಾರ ರಚನೆಯಾದ ನಂತರ ಮಧ್ಯಪ್ರದೇಶ ಕಾಂಗ್ರೆಸ್ ನಲ್ಲಿ ಆಂತರಿಕ ಕಲಹ ನಡೆಯುತ್ತಲೇ ಇತ್ತು.

SCROLL FOR NEXT