ದೇಶ

ಗಲ್ಲು ಶಿಕ್ಷೆಗೆ ತಡೆ ನೀಡಿ: 'ಸುಪ್ರೀಂ' ಆಯ್ತು, ಈಗ ಅಂತಾರಾಷ್ಟ್ರೀಯ ಕೋರ್ಟ್ ಮೊರೆ ಹೋದ ನಿರ್ಭಯಾ ಹತ್ಯಾಚಾರಿಗಳು!

Srinivasamurthy VN

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳು ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳಲು ದಿನಕ್ಕೊಂದು ಹೈ ಡ್ರಾಮಾ ಮಾಡುತ್ತಿದ್ದು, ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಂತಾರಾಷ್ಟ್ರೀಯ ಕೋರ್ಟ್ ನ  ಬಾಗಿಲು ತಟ್ಟಿದ್ದಾರೆ.

ಹೌದು.. ಶತಾಯಗತಾಯ ತಮಗೆ ನೀಡಿರುವ ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಬೇಕು ಎಂದು ನಿರ್ಭಯಾ ಹತ್ಯಾಚಾರ ಪ್ರಕರಣದ ಅಪರಾಧಿಗಳಾದ ಅಕ್ಷಯ್ ಕುಮಾರ್ ಸಿಂಗ್, ಪವನ್ ಗುಪ್ತಾ ಮತ್ತು ವಿನಯ್ ಶರ್ಮಾ ಇದೀಗ ಅಂತಾರಾಷ್ಟ್ರೀಯ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಗೆ ಮುಂದಾಗಿದ್ದಾರೆ. ತಮಗೆ ನೀಡಿರುವ ಗಲ್ಲು ಶಿಕ್ಷೆಗೆ ತಡೆ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಪ್ರಕರಣದ ಮತ್ತೋರ್ವ ಅಪರಾಧಿ ಮುಖೇಶ್ ಸಿಂಗ್ ನ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ಈ ಮೂವರು ಇದೀಗ ಅಂತಾರಾಷ್ಟ್ರೀಯ ಕೋರ್ಟ್ ಮೊರೆ ಹೋಗಿದ್ದಾರೆ.

ಇನ್ನು ಕಳೆದ ಮಾರ್ಚ್ 5ರಂದು ದೆಹಲಿಯ ಪಾಟಿಯಾಲಾ ಸೆಷನ್ಸ್ ಕೋರ್ಟ್ ನಿರ್ಭಯಾ ಹತ್ಯಾಚಾರ ಪ್ರಕರಣದ ಎಲ್ಲ ಅಪರಾಧಿಗಳಿಗೆ ಹೊಸದಾಗಿ ಡೆತ್ ವಾರಂಟ್ ಜಾರಿ ಮಾಡಿತ್ತು. ಅದರಂತೆ ಇದೇ ಮಾರ್ಚ್ 20ರ ಬೆಳಗ್ಗೆ 5.30ರೊಳಗೆ ಎಲ್ಲ ಅಪರಾಧಿಗಳನ್ನೂ ಗಲ್ಲಿಗೇರಿಸಬೇಕಿದೆ. 

SCROLL FOR NEXT