ದೇಶ

ಕೊರೋನಾ ಭೀತಿ: ಮನೆಗಳಿಂದ ಹೊರಬರದಂತೆ ಜನತೆ ಬಳಿ ಮಹಾರಾಷ್ಟ್ರ ಸಿಎಂ ಠಾಕ್ರೆ ಮನವಿ

Manjula VN

ಕೊರೋನಾ ವಿರುದ್ಧ ನಾವೆಲ್ಲರೂ ಯುದ್ಧ ಮಾಡುತ್ತಿದ್ದೇವೆ, ಪರಿಸ್ಥಿತಿ ಆತಂಕ ಸೃಷ್ಟಿಸಿದೆ: 'ಮಹಾ' ಸಿಎಂ ಠಾಕ್ರೆ

ನವದೆಹಲಿ: ದೇಶದ ಇತರೆ ರಾಜ್ಯಗಳಿಂತಲೂ ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮನೆಗಳಿಂದ ಹೊರ ಬರದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಜನತೆ ಬಳಿ ಮನವಿ ಮಾಡಿಕೊಂಡಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇದು ಕೊರೋನಾ ವೈರಸ್ ವಿರುದ್ಧದ ಯುದ್ಧವಾಗಿದ್ದು, ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಿದೆ. ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಸರ್ಕಾರಿ ಅಧಿಕಾರಿಗಳು, ವೈದ್ಯರು, ಶುಶ್ರೂಷಕರು ಹಾಗೂ ಆಸ್ಪತ್ರೆಯ ಇತರೆ ಸಿಬ್ಬಂದಿಗಳು ಗಡಿಯಾರದ ಮುಳ್ಳುಗಳಂತೆ ಕೆಲಸ ಮಾಡುತ್ತಿದ್ದಾರೆ. ಪರಿಸ್ಥಿತಿ ಚಿಂತಾಜನಕವಾಗಿಲ್ಲದಿದ್ದರೂ, ಆತಂಕ ಪಡುವಂತಹದ್ದಾಗಿದೆ ಎಂದು ಹೇಳಿದ್ದಾರೆ. 

ವೈರಸ್ ತಡೆಗಟ್ಟಲು ನಾವೆಲ್ಲರೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅನಗತ್ಯ ಪ್ರವಾಸ, ಪ್ರಯಾಣಗಳನ್ನು ನಿಯಂತ್ರಿಸಬೇಕಿದೆ. ಮನೆಗಳಿಂದ ಹೊರಬರುವುದನ್ನು ಜನರು ನಿಯಂತ್ರಿಸಬೇಕಿದೆ. ವಿದೇಶಗಳಿಂದ ಬರುವ ಜನರು ಇತರರಿಗೆ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಗೃಹ ಬಂಧನಕ್ಕೆ ವಿಧಿಸಲಾಗಿರುವ ನಿಯಮಗಳನ್ನು ಅನುಸರಿಸಬೇಕಿದೆ. ಸರ್ಕಾರ ರೈಲು ಹಾಗ ಬಸ್ ಗಳ ಸಂಚಾರವನ್ನು ನಿಲ್ಲಿಸಬಹುದು. ಆದರೆ, ಇಂತಹ ನಿರ್ಧಾರಗಳನ್ನು ನಾನು ತೆಗೆದುಕೊಳ್ಳವುದಿಲ್ಲ. ರಾಜ್ಯದ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು 24*7ರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹವರಿಗೆ ಬೆಂಬಲ ನೀಡುವ ಸಲುವಾಗಿ ಜನರೇಗೆ ಅನಗತ್ಯ ಪ್ರಯಾಣಗಳನ್ನು ನಿಯಂತ್ರಿಸಬಾರದು?...

ಗೃಹ ಬಂಧನದಲ್ಲಿರುವಂತೆ ಸೂಚನೆ ನೀಡಿದ್ದರೂ, ಕೆಲವರು ರಸ್ತೆಗಳಲ್ಲಿ ಓಡಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಇಂತಹ ವರ್ತನೆಗಳು ಇತರೆ ಜನರಿಗೆ ನೇರ ಹಾಗೂ ಪರೋಕ್ಷವಾಗಿ ವೈರಸ್ ಹರಡುವಂತ ಮಾಡುತ್ತದೆ. ಈ ಪಿಡುಗನ್ನು ನಾವು ಹೋಗಲಾಡಿಸಬಹುದು. ಆದರೆ, ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು. ವೈರಸ್ ಜಾತಿ, ಧರ್ಮವನ್ನು ನೋಡುವುದಿಲ್ಲ. ಎಲ್ಲಾ ಸಮುದಾಯದ ಸಹಕಾರವನ್ನು ನಾನು ಬಯಸುತ್ತಿದ್ದೇನೆ. ಸರ್ಕಾರವನ್ನು ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡಲು ಒತ್ತಡವನ್ನು ಕಡಿಮೆ ಮಾಡಬೇಕು. ಅದು ನಮ್ಮ ಕೈಯಲ್ಲಿಯೇ ಇದೆ. ಸರ್ಕಾರದ ನಿಯಮಗಳನ್ನು ಹಾಗೂ ಮಾರ್ಗದರ್ಶನಗಳನ್ನು ಅನುಸರಿಸಿ. ಸರ್ಕಾರದ ಅಧಿಕೃತ ಮಾಹಿತಿಯನ್ನು ಬಿಟ್ಟರೆ ಬೇರಾವುದೇ ಮಾಹಿತಿಗಳನ್ನು ನಂಬಬೇಡಿ ಎಂದು ತಿಳಿಸಿದ್ದಾರೆ. 

ಕಳೆದ ದಿನಗಳಿಂದ ದೇಶದಲ್ಲಿಯೇ ಅತೀ ಹೆಚ್ಚು ಸೋಂಕಿತ ಪ್ರಕರಣಗಳು ಮಹಾರಾಷ್ಟ್ರದಲ್ಲಿ ವರದಿಯಾಗುತ್ತಿದೆ. ಸುಮಾರು 7ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರು ಚಿಕಿತ್ಸಾ ಕೇಂದ್ರಗಳಿಂದ ತಪ್ಪಿಸಿಕೊಳ್ಳುತ್ತಿರುವುದು ಮಹಾರಾಷ್ಟ್ರ ಸರ್ಕಾರಕ್ಕೆ ದೊಡ್ಡ ನೋವಾಗಿ ಪರಿಣಮಿಸಿದೆ. 

SCROLL FOR NEXT