ದೇಶ

ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ರೆಬೆಲ್ ಶಾಸಕರೊಂದಿಗೆ ಚರ್ಚೆಗೆ 'ಸುಪ್ರೀಂ' ಸಲಹೆ, ಸ್ಪೀಕರ್ ನಕಾರ!

Srinivasamurthy VN

ನವದೆಹಲಿ: ಮಧ್ಯ ಪ್ರದೇಶ ರಾಜಕೀಯ ಬಿಕ್ಕಟ್ಟು ಮುಂದುವರೆದಿರುವಂತೆಯೇ ರೆಬೆಲ್ ಶಾಸಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿ ಅಭಿಪ್ರಾಯ ತಿಳಿಯುವಂತೆ ವಿಧಾನಸಭೆ ಸ್ಪೀಕರ್ ಎನ್ ಪಿ ಪ್ರಜಾಪತಿ ಅವರಿಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.

ಬಹುಮತ ಸಾಬೀತು ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ಹೇಮಂತ್ ಗುಪ್ತಾ ಅವರ ನೇತೃತ್ವದ ಪೀಠ ಇಂತಹುದೊಂದು ಸಲಹೆ ನೀಡಿದೆ. ರೆಬೆಲ್ ಶಾಸಕರು ನಿಜಕ್ಕೂ ಸರ್ಕಾರದಿಂದ ದೂರಉಳಿಯಲು ನಿರ್ಧರಿಸಿದ್ದಾರೆಯೇ ಅಥವಾ ಅವರು ಬೇರೊಬ್ಬರ ಒತ್ತಡಕ್ಕೆ ಮಣಿದಿದ್ದಾರೆಯೇ? ಅವರ ಅಂತಿಮ ಅಭಿಪ್ರಾಯದ ಕುರಿತು ಸ್ಪೀಕರ್ ಎನ್ ಪಿ ಪ್ರಜಾಪತಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಅಭಿಪ್ರಾಯ ಸಂಗ್ರಹಿಸಲಿ ಎಂದು ಪೀಠ ಹೇಳಿದೆ.

ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಆಗ ಕೋರ್ಟ್ ಇದಕ್ಕಾಗಿ ವೀಕ್ಷಕರನ್ನು ನೇಮಕ ಮಾಡಬೇಕಾಗುತ್ತದೆ ಎಂದು ಹೇಳಿದೆ. ಆದರೆ ಸುಪ್ರೀಂ ಕೋರ್ಟ್ ನ ಈ ಸಲಹೆಯನ್ನು ಸ್ಪೀಕರ್ ತಿರಸ್ಕರಿಸಿದ್ದು, ಈ ಕುರಿತಂತೆ ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ವಾದ ಮಂಡಿಸಿದರು. ಸ್ಪೀಕರ್ ಗೆ ಕೋರ್ಟ್ ಸಮಯ ನಿಗದಿ ಮಾಡಿದರೆ ಆಗ ಸಾಂವಿಧಾನಿಕ ಬಿಕ್ಕಟ್ಟು ಎದುರಾಗುತ್ತದೆ. ಹೀಗಾಗಿ ಈ ಸ್ಪೀಕರ್ ಕಾರ್ಯವ್ಯಾಪ್ತಿ ಮೇಲೆ ನಿರ್ದೇಶನ ನೀಡಬಾರದು. ಶಾಸಕರ ರಾಜಿನಾಮೆ ಅಂಗೀಕಾರ ಮತ್ತು ಅನರ್ಹಗೊಳಿಸುವಿಕೆ ನಿರ್ಧಾರವನ್ನು ಸ್ಪೀಕರ್ ವಿವೇಚನಗೆ ಬಿಡಬೇಕು ಎಂದು ಮನವಿ ಮಾಡಿದ್ದಾರೆ.

ಇದಕ್ಕೂ ಮೊದಲು ಸುಪ್ರೀಂ ಕೋರ್ಟ್ ಗೆ ಹೇಳಿಕೆ ನೀಡಿದ್ದ ಸ್ಪೀಕರ್ ಪ್ರಜಾಪತಿ ಅವರು ರೆಬೆಲ್ ಶಾಸಕರ ಕುರಿತು ನಿರ್ಧಾರ ಕೈಗೊಳ್ಳಲು ತಮಗೆ 2 ವಾರಗಳ ಕಾಲಾವಕಾಶ ಬೇಕು ಎಂದು ಕೇಳಿದ್ದರು.

SCROLL FOR NEXT