ದೇಶ

ಕೊರೋನಾ ವೈರಸ್: ಸಂಪೂರ್ಣ ದೇಶ ಸ್ಥಗಿತಕ್ಕೆ WHO ಸಲಹೆ; ಆಡಿಯೋ ನಕಲಿ ಎಂದ ಕೇಂದ್ರ ಸರ್ಕಾರ

Srinivasamurthy VN

ನವದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಂಪೂರ್ಣ ದೇಶವನ್ನು ಸ್ಥಗಿತಗೊಳಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿತ್ತು ಎಂಬ ಆಡಿಯೋ ಸಂದೇಶ ಸುಳ್ಳು ಸುದ್ದಿ ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಭಾರತದ ಆರೋಗ್ಯ ಸಚಿವಾಲಯದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಈ ವೇಳೆ ಕೆಲ ದಿನಗಳ ಕಾಲ ಸಂಪೂರ್ಣ ದೇಶ ಸ್ಥಗಿತಗೊಳಿಸಲು ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಭಾರತಕ್ಕೆ ಸಲಹೆ ನೀಡಿದ್ದರು. ಇಂತಹುದೊಂದು ಆಡಿಯೋ ಸಂದೇಶ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. 

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಮಾಹಿತಿ ಸಚಿವಾಲಯ ಇದು ಸುಳ್ಳು ಸುದ್ದಿ. ಇಂತಹ ಯಾವುದೇ ಚರ್ಚೆ ನಡೆದಿಲ್ಲ. ಅಂತೆಯೇ ವಿಶ್ವ ಆರೋಗ್ಯ ಸಂಸ್ಥೆ ದೇಶವನ್ನು ಸ್ಥಗಿತಗೊಳಿಸುವ ಯಾವುದೇ ಸಲಹೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೆ ಇಂತಹ ಸುದ್ದಿ, ಸಂದೇಶ, ಮಾಹಿತಿ ಅಥವಾ ಆಡಿಯೋ ಕ್ಲಿಪ್ ದೊರೆತರೆ ಅದನ್ನು ಯಾರಿಗೂ ಕಳುಹಿಸಬೇಡಿ ಎಂದು ಮವವಿ ಮಾಡಿದೆ. 

ಅಲ್ಲದೆ ಇಂತಹ ಸುಳ್ಳು ಸುದ್ದಿ ಹಬ್ಬಿಸಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದೂ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

SCROLL FOR NEXT