ದೇಶ

'ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳುವವರು ಕಲಾಪ ನಡೆಸುವುದು ಏಕೆ: ಪ್ರಧಾನಿ ಮೋದಿಗೆ ಶಿವಸೇನೆ ಪ್ರಶ್ನೆ 

Sumana Upadhyaya

ನವದೆಹಲಿ: ಕೊರೋನಾ ವೈರಸ್ ತಡೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಪ್ರಧಾನಿ ಮೋದಿ ಕೇಳುತ್ತಿದ್ದಾರೆ, ಆದರೆ ಇನ್ನೊಂದೆಡೆ ಅವರು, ರಾಜಕೀಯ ಉದ್ದೇಶಕ್ಕೆ ಸಂಸತ್ತು ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿರುವ ಕ್ರಮದ ಅರ್ಥವೇನು ಎಂದು ಶಿವಸೇನೆ ಪ್ರಶ್ನೆ ಮಾಡಿದೆ.


ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಈ ಬಗ್ಗೆ ಬರೆಯಲಾಗಿದ್ದು, ಸಾವಿರಾರು ಜನ ಸಂಸದರು, ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಸತ್ತಿಗೆ ಬಂದು, ಹೋಗುತ್ತಾರೆ, ಕೆಲಸ ಮಾಡುತ್ತಾರೆ. ಒಂದೆಡೆ ಸರ್ಕಾರದ ಕೆಲಸಗಳನ್ನು ಸ್ಥಗಿತಗೊಳಿಸಿದ್ದಾರೆ, ಇನ್ನೊಂದೆಡೆ ಸಂಸತ್ತು ಕಲಾಪಗಳು ನಡೆಯುತ್ತಿವೆ. ಪ್ರಧಾನಿಗಳ ನಡೆ ಪ್ರಜಾಪ್ರಭುತ್ವ ಸರ್ಕಾರದ ಸಂಪ್ರದಾಯಗಳನ್ನು ಉಳಿಸಿಕೊಳ್ಳುವಂತೆ ಕಾಣುತ್ತಿಲ್ಲ ಎಂದು ಟೀಕಿಸಿದೆ. 

ಮರಾಠಿ ಭಾಷೆಯಲ್ಲಿ ದಿನಂಪ್ರತಿ ಪ್ರಕಟವಾಗುವ ಸಾಮ್ನಾ ಪತ್ರಿಕೆಯಲ್ಲಿ ಶಿವಸೇನೆ, ಮಧ್ಯ ಪ್ರದೇಶ ಸರ್ಕಾರವನ್ನು ಉರುಳಿಸಲು ಮೋದಿ ಸರ್ಕಾರ ಕಲಾಪ  ನಡೆಸುತ್ತಿದೆ ಎಂದು ಆರೋಪಿಸಿದೆ.

ಮಧ್ಯ ಪ್ರದೇಶ ಸರ್ಕಾರದಲ್ಲಿ ಬಹುಮತ ಸಾಬೀತುಪಡಿಸುವ ಅನಿವಾರ್ಯತೆ ಕಮಲ್ ನಾಥ್ ಅವರಿಗಿದೆ. ಕೊರೋನಾ ವೈರಸ್ ನಂತಹ ಕಷ್ಟದ ಪರಿಸ್ಥಿತಿ ಮಧ್ಯೆ ವಿಧಾನಸಭೆ ನಡೆಸುವುದು ಹೇಗೆ ಎಂಬುದು ಕಮಲ್ ನಾಥ್ ಮತ್ತು ಅವರ ಬೆಂಬಲಿಗರ ವಾದವಾಗಿದೆ. ಸಂಸತ್ತು ಕಲಾಪವನ್ನು ಮೊಟಕುಗೊಳಿಸಿದರೆ ಮಧ್ಯ ಪ್ರದೇಶದಲ್ಲಿ ಕಮಲ್ ನಾಥ್ ಅವರ ವಾದಕ್ಕೆ ಬಲ ಸಿಗುತ್ತದೆ. ಹೀಗಾಗಿ ಅಲ್ಲಿ ಸರ್ಕಾರವನ್ನು ಬೀಳಿಸಲು ಈ ತುರ್ತು ಸನ್ನಿವೇಶದಲ್ಲಿ ಕೂಡ ಸಂಸತ್ತು ಕಲಾಪವನ್ನು ನಡೆಸಲಾಗುತ್ತಿದೆ ಎಂದು ಸಂಸತ್ತಿನ ಕಾರಿಡಾರಿನಲ್ಲಿ ಕೇಳಿಬರುತ್ತಿರುವ ಮಾತುಗಳಾಗಿದೆ. ಇದು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎಂಬುದು ಕೇಂದ್ರ ಸರ್ಕಾರದ ನಾಯಕರೇ ಹೇಳಬೇಕು ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.


ಕೊರೋನಾ ವೈರಸ್ ತಡೆಗೆ ಸರ್ಕಾರದ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಶಿವಸೇನೆ ಒತ್ತಾಯಿಸಿದೆ.

SCROLL FOR NEXT