ದೇಶ

ಜನತಾ ಕರ್ಫ್ಯೂಗೆ ಲೋಕಸಭೆಯಲ್ಲಿ ಪಕ್ಷಾತೀತ ಬೆಂಬಲ, ಇದು ನಮ್ಮ ಪ್ರಜಾಪ್ರಭುತ್ವದ ವಿಶೇಷ: ಓಂ ಬಿರ್ಲಾ

Lingaraj Badiger

ನವದೆಹಲಿ: ದೇಶದಲ್ಲಿ ಐವರನ್ನು ಬಲಿ ತೆಗೆದುಕೊಂಡಿರುವ ಮಾರಕ ಕೊರೋನಾ ವೈರಾಣು ಸೋಂಕು ನಿಯಂತ್ರಣಕ್ಕೆ ಲೋಕಸಭಾ ಸದಸ್ಯರು ಅಗತ್ಯ ಶ್ರಮ ವಹಿಸಲಿದ್ದಾರೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಶುಕ್ರವಾರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ದೇಶಾದ್ಯಂತ 200ಕ್ಕೂ ಹೆಚ್ಚು ಜನರು ಕೊರೋನಾ ವೈರಾಣು ಸೋಂಕಿಗೆ ಒಳಪಟ್ಟಿದ್ದು, 5 ಮಂದಿ ಮೃತಪಟ್ಟಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿ, ಭಾನುವಾರ ಜನತಾ ಕರ್ಫ್ಯೂ ನಡೆಸಲು ಉದ್ದೇಶಿಸಿದ್ದು, ಅಂದು ದೇಶದ ಜನರು ಮನೆಯಲ್ಲೇ ಇದ್ದು, ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಶ್ರಮಿಸುತ್ತಿರುವ ವೈದ್ಯರು, ಶುಶ್ರೂಷಕಿಯರು, ವೈದ್ಯಕೀಯೇತರ ಸಿಬ್ಬಂದಿಗೆ ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಬೇಕು ಎಂದು ಮನವಿ ಮಾಡಿದ್ದರು.

“ಪ್ರಧಾನಿ ಮೋದಿಯವರ ಉದ್ದೇಶಿತ ಜನತಾ ಕರ್ಫ್ಯೂಗೆ ಲೋಕಸಭೆ ಸಹಕರಿಸಲಿದೆ. ಎಲ್ಲಾ ವಿಪಕ್ಷ ನಾಯಕರೂ ಸಹ ಜನತಾ ಕರ್ಫ್ಯೂನಲ್ಲಿ ಭಾಗವಹಿಸುವ ಭರವಸೆ ನೀಡಿದ್ದಾರೆ. ಸಂಕಷ್ಟದ ಸಮಯದಲ್ಲಿ ಒಗ್ಗಟ್ಟು ಪ್ರದರ್ಶಿಸುವುದೇ ಭಾರತದ ಪ್ರಜಾಪ್ರಭುತ್ವ ವಿಶೇಷ ಗುಣ. ಜಗತ್ತನ್ನು ವ್ಯಾಪಿಸುತ್ತಿರುವ ಸೋಂಕನ್ನು ಎದುರಿಸಲೇಬೇಕಿದೆ” ಎಂದು ಓಂಬಿರ್ಲಾ ಹೇಳಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿಯವರು ಗುರುವಾರದ ಭಾಷಣದಲ್ಲಿ, “ಕೊರೋನಾ ವೈರಸ್ ಬಗ್ಗೆ ದೇಶದ ಜನರು ಆತಂಕ ಪಡಬೇಕಿಲ್ಲ. ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸರಿಯಾಗಿ ಕೈ ತೊಳೆಯಿರಿ, ಅನಗತ್ಯ ಪ್ರಯಾಣ ಬೇಡ.  ಬೆಳಗ್ಗೆ 6 ರಿಂದ ರಾತ್ರಿ 9 ಗಂಟೆಯವರೆಗೆ ಮನೆಯಲ್ಲಿಯೇ ಇರಿ” ಎಂದು ಮನವಿ ಮಾಡಿದ್ದಾರೆ.

SCROLL FOR NEXT