ದೇಶ

ತಮಿಳುನಾಡಿನ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ: 8 ಸಾವು

Nagaraja AB

ವಿರುದುನಗರ: ತಮಿಳುನಾಡಿನ ವೆಂಬಕೊಟ್ಟೈ ಬಳಿಯ ಚಿಪ್ಪಿಪ್ಪಾರೈ ನಲ್ಲಿನ ಪಟಾಕಿ ತಯಾರಿಕಾ ಘಟಕದಲ್ಲಿ  ಭಾರೀ ಪ್ರಮಾಣದ ಸ್ಫೋಟ ಉಂಟಾಗಿ ಆರು ಮಹಿಳೆಯರು ಸೇರಿದಂತೆ ಅಪರಿಚಿತರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ಇದು ಈ ಜಿಲ್ಲೆಯಲ್ಲಿ ಈ ತಿಂಗಳಲ್ಲಿ ಸಂಭವಿಸಿದ ಎರಡನೇ ಸ್ಫೋಟ ಪ್ರಕರಣವಾಗಿದೆ. ಕಕ್ಕಿವಾದಂಪಟ್ಟಿ ಬಳಿ ಸಂಭವಿಸಿದ್ದ ಮೊದಲ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರು.

ಅಕ್ರಮವಾಗಿ ಪಟಾಕಿ ತಯಾರಿಯೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಶ್ರೀ ರಾಜಮ್ಮಲ್ ಪಟಾಕಿ ಕಾರ್ಖಾನೆಯಲ್ಲಿ ಪಟಾಕಿ ತಯಾರಿಸುವಾಗ  ರಾಸಾಯನಿಕ ಮಿಶ್ರಣ ಕೊಠಡಿಯಲ್ಲಿ ಘರ್ಷಣೆ ಸಂಭವಿಸಿ ಬೆಂಕಿಯುಂಟಾಗಿದೆ. ಇದರಿಂದಾಗಿ ಸ್ಥಳದಲ್ಲೇ ಆರು ಮಂದಿ  ಮಹಿಳೆಯರು ದುರ್ಮರಣ ಹೊಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕೂಡಲೇ ನಾಲ್ಕು ಅಗ್ನಿಶಾಮಕ ವಾಹನಗಳಲ್ಲಿ ಬಂದ ಸಿಬ್ಬಂದಿ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಕಾರ್ಖಾನೆಯ ಏಳು ಕೊಠಡಿಯ ಪೈಕಿ ಆರು ಬೆಂಕಿಗೆ ಸುಟ್ಟು ಕರಕಲಾಗಿವೆ. ಬೆಂಕಿಯಲ್ಲಿ ಬೆಂದು ಹೋಗಿದ ಆರು ಮೃತದೇಹಗಳನ್ನು ಸಟ್ಟೂರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅವರನ್ನು ಗುರುತಿಸುವುದು ಕಷ್ಟಕರವಾಗಿದೆ.  

ಈ ಸ್ಫೋಟದ ಸಂಬಂಧ ರಾಜಮ್ಮಲ್ ಪಟಾಕಿ ತಯಾರಿಕಾ ಕಾರ್ಖಾನೆ ಮಾಲೀಕ ಆರ್ ಗಣೇಶನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

SCROLL FOR NEXT