ದೇಶ

ಕೊರೋನಾದಿಂದ 7 ಸಾವು: ಸೋಂಕು ಪೀಡಿತ 75 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲು ಕೇಂದ್ರ ಸಲಹೆ

Nagaraja AB

ನವದೆಹಲಿ: ಜಗತ್ತಿನಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಕೊರೋನಾವೈರಸ್ ನಿಂದಾಗಿ ದೇಶದಲ್ಲಿ ಏಳು ಜನರು ಮೃತಪಟ್ಟಿರುವುದು ದೃಢಪಟ್ಟಿದೆ

ಇದರೊಂದಿಗೆ ದೇಶದ ವಿವಿಧೆಡೆ ಕೊರೋನಾ  ಸೋಂಕಿತರ ಸಂಖ್ಯೆ  344ಕ್ಕೆ ಏರಿಕೆ ಆಗಿದ್ದು, 75 ಜಿಲ್ಲೆಗಳನ್ನು ಸಂಪೂರ್ಣವಾಗಿ ಸ್ತಬ್ಧಗೊಳಿಸಲು (ಲಾಕ್ ಡೌನ್ ) ಕೇಂದ್ರ ಸರ್ಕಾರ ಸೂಚನೆ ಸಲಹೆ ನೀಡಿದೆ.

ಈ ಜಿಲ್ಲೆಗಳಲ್ಲಿ ಕೇವಲ ಅಗತ್ಯ ಸೇವೆಗಳನ್ನು ಮಾತ್ರ ದೊರೆಯಲಿವೆ, ಅಂತಾರಾಜ್ಯ ಪ್ರಯಾಣಿಕರ ಸಂಚಾರ ಸೇರಿದಂತೆ ಮತ್ತಿತರ ಅಗತ್ಯಯೇತರ ಸೇವೆಗಳ ಮೇಲೆ ಮಾರ್ಚ್  31ರವರೆಗೂ ನಿರ್ಬಂಧ ಹೇರಲಾಗಿದೆ.

ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 

ಪ್ರಧಾನಮಂತ್ರಿ ನರೇಂದ್ರ ಮೋದಿ ಕೊರೋನಾವೈರಸ್ ಹರಡದಂತೆ ಜನರಲ್ಲಿ ಅರಿವು ಮೂಡಿಸಲು ಇಂದು ಕರೆ ನೀಡಲಾಗಿದ್ದ ಜನತಾ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಆರೋಗ್ಯ ಸಚಿವಾಲಯ ದೇಶದ ಜನರಿಗೆ ಧನ್ಯವಾದ ಸಲ್ಲಿಸಿದೆ. ಸೋಂಕು ಹರಡದಂತೆ ತಡೆಗಟ್ಟುವಲ್ಲಿ  ವಿದೇಶದಿಂದ ದೇಶಕ್ಕೆ ಆಗಮಿಸುವವರನ್ನು ಪ್ರತ್ಯೇಕವಾಗಿ ಇಡುವುದು ಮಹತ್ವದ್ದಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. 

ಈ ಸೋಂಕಿನಿಂದ ಗುಜರಾತಿನ ಸೂರತ್ ನಲ್ಲಿ 69 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮಹಾರಾಷ್ಟ್ರದಲ್ಲಿ ಎರಡು  ಹಾಗೂ ಬಿಹಾರದಲ್ಲಿಯೂ ಒಬ್ಬರು ಸಾವನ್ನಪ್ಪಿದ್ದಾರೆ. ದೆಹಲಿ, ಕರ್ನಾಟಕ, ಪಂಜಾಬ್ ನಲ್ಲಿಯೂ ತಲಾ ಒಂದೊಂದು ಸಾವಿನ ಪ್ರಕರಣಗಳು ವರದಿಯಾಗಿವೆ. ಒಟ್ಟು ಸೋಂಕಿತರ ಪ್ರಮಾಣ 344ಕ್ಕೆ ಏರಿಕೆ ಆಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

SCROLL FOR NEXT