ದೇಶ

ಮುಂದುವರಿದ ಕೊರೋನಾ ಮರಣ ಮೃದಂಗ:ತಮಿಳು ನಾಡಿನಲ್ಲಿ ಮೊದಲ ಸಾವು, ಭಾರತದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ 

Sumana Upadhyaya

ನವದೆಹಲಿ/ಮಧುರೈ: ತಮಿಳು ನಾಡಿನಲ್ಲಿ ಮೊದಲ ಕೊರೋನಾ ಸೋಂಕು ಸಾವು ವರದಿಯಾಗಿದೆ. ಇಂದು ಬೆಳಗ್ಗೆ ಮಧುರೈಯ ಅಣ್ಣಾ ನಗರದಲ್ಲಿ 54 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ತಮಿಳು ನಾಡು ರಾಜ್ಯದಲ್ಲಿ ಇದು ಮೊದಲ ಕೊರೋನಾ ವೈರಸ್ ಸಾವು ಪ್ರಕರಣವಾಗಿದೆ.

ತಮಿಳು ನಾಡು ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಅವರು ಕೊರೋನಾ ರೋಗಿಯ ಸಾವನ್ನು ದೃಢಪಡಿಸಿದ್ದಾರೆ. ಮಧುರೈಯ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ರೋಗಿ ಮೃತಪಟ್ಟಿದ್ದಾರೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಈ ವ್ಯಕ್ತಿಯಲ್ಲಿ ಸುದೀರ್ಘ ಕಾಲದಿಂದ ಕಾಯಿಲೆಯಿತ್ತು ಎಂದು ವೈದ್ಯಕೀಯ ವರದಿ ಹೇಳುತ್ತದೆ.

ಭಾರತದಲ್ಲಿ ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ 562ಕ್ಕೇರಿದೆ. ಇದುವರೆಗೆ 53 ಕೊರೋನಾ ವೈರಸ್ ಪೀಡಿತರು ಗುಣಮುಖರಾಗಿದ್ದಾರೆ.

ಕಳೆದ ಮಧ್ಯರಾತ್ರಿಯಿಂದ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಕೊರೋನಾ ವೈರಸ್ ತಡೆಗೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಪರಿಹಾರ ಎಂದು ಮೋದಿಯವರು ಹೇಳಿದ್ದಾರೆ.

ಗೃಹ ವ್ಯವಹಾರಗಳ ಸಚಿವಾಲಯ ಮಾರ್ಗಸೂಚಿ ಹೊರಡಿಸಿದ್ದು, ಅದರ ಪ್ರಕಾರ ಕೇಂದ್ರ ಸರ್ಕಾರದ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳು, ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಕಚೇರಿಗಳು, ಸಾರ್ವಜನಿಕ ಉದ್ದಿಮೆಗಳು ಇನ್ನು 21 ದಿನಗಳ ಕಾಲ ಸಂಪೂರ್ಣ ಬಂದ್ ಆಗಿರುತ್ತದೆ.

ಏನೇನಿರುತ್ತೆ, ಏನೇನಿರಲ್ಲ: ಆದರೆ ರಕ್ಷಣಾ ಇಲಾಖೆ, ಕೆಂದ್ರ ಸೇನಾ ಪೊಲೀಸ್ ಪಡೆ, ಖಜಾನೆ, ಸಾರ್ವಜನಿಕರಿಗೆ ಅತ್ಯಗತ್ಯವಾದ ಪೆಟ್ರೋಲಿಯಂ, ಸಿಎನ್ ಜಿ, ಎಲ್ ಪಿಜಿ, ಪಿಎನ್ ಜಿಗಳು, ವಿಪತ್ತು ನಿರ್ವಹಣಾ ಪಡೆ, ವಿದ್ಯುತ್ ನಿಗಮ, ಟ್ರಾನ್ಸ್ ಮಿಷನ್ ಘಟಕಗಳು, ಅಂಚೆ ಕಚೇರಿಗಳು, ರಾಷ್ಟ್ರೀಯ ಮಾಹಿತಿ ಕೇಂದ್ರ, ತುರ್ತು ಎಚ್ಚರಿಕೆ ಸಂಸ್ಥೆಗಳು ಬಂದ್ ಆಗದೆ ಕಾರ್ಯನಿರ್ವಹಿಸುತ್ತವೆ.

ರಾಜ್ಯ ಮತ್ತು ಕೇಂದ್ರಾಡಳಿತ ಸರ್ಕಾರಗಳು, ಅವುಗಳ ಸ್ವಾಯತ್ತ ಅಂಗಗಳು, ನಿಗಮಗಳು ಇನ್ನು 21 ದಿನಗಳು ಮುಚ್ಚಿರುತ್ತವೆ. ಕೇವಲ ಪೊಲೀಸ್, ಗೃಹ ಇಲಾಖೆ, ರಕ್ಷಣೆ, ಅಗ್ನಿಶಾಮಕ, ಕಾರಾಗೃಹ, ಜಿಲ್ಲಾಡಳಿತ, ಖಜಾನೆ ಇಲಾಖೆಗಳು, ವಿದ್ಯುತ್, ಜಲ ಮಂಡಳಿ, ಪೌರಾಡಳಿತ, ಶುಚಿತ್ವ, ನಗರ ಪಾಲಿಕೆಗಳು ಕಾರ್ಯನಿರ್ವಹಿಸುತ್ತವೆ.

SCROLL FOR NEXT