ದೇಶ

ಕೊರೋನಾಗೆ ಮತ್ತೊಂದು ಬಲಿ, ಒಂದೇ ದಿನ 88 ಹೊಸ ಸೋಂಕು ಪ್ರಕರಣ; 700ಗಡಿಯತ್ತ ಸೋಂಕಿತರ ಸಂಖ್ಯೆ, 18 ಸಾವು

Srinivasamurthy VN

ನವದೆಹಲಿ: ಲಾಕ್ ಡೌನ್ ಹೊರತಾಗಿಯೂ ಭಾರತದಲ್ಲಿ ಮಾರಕ ಕೊರೋನಾ ವೈರಸ್ ಗೆ ತುತ್ತಾಗುತ್ತಿರುವ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ನಿನ್ನೆ ಒಂದೇ ದಿನ 88 ಹೊಸ ಸೋಂಕು ಪ್ರಕರಣಗಳು ದಾಖಲಾಗಿದೆ. ಆ ಮೂಲಕ ಭಾರತದಲ್ಲಿ ವೈರಸ್  ಸೋಂಕಿತರ ಸಂಖ್ಯೆ 700 ಗಡಿಯತ್ತ ಸಾಗಿದೆ.

ಇಂದು ರಾಜಸ್ಥಾನದಲ್ಲಿ ಕೊರೋನಾ ವೈರಸ್ ಗೆ ಮತ್ತೊಂದು ಬಲಿಯಾಗಿದ್ದು, ಆ ಮೂಲಕ ಭಾರತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ರಾಜಸ್ಥಾನದಲ್ಲಿ ಮತ್ತೊಂದು ಸಾವು ಸಂಭವಿಸಿದ್ದು, ಭಿಲ್ವಾರ ಜಿಲ್ಲೆಯ ಮಹತ್ಮಾ ಗಾಂಧಿ ಆಸ್ಪತ್ರೆಯಲ್ಲಿದ್ದ ಸೋಂಕಿತರೊಬ್ಬರು  ಸಾವನ್ನಪ್ಪಿದ್ದಾರೆ. ಕೊರೋನಾ ವೈರಸ್ ಸೋಂಕಿನೊಂದಿಗೆ ಅವರಿಗೆ ಕಿಡ್ನಿ ಮತ್ತು ರಕ್ತದೊತ್ತಡದ ಸಮಸ್ಯೆ ಕೂಡ ಇತ್ತು ಎಂದು ಆಸ್ಪತ್ರೆಯ ಪ್ರಾಂಶುಪಾಲ ರಾಜನ್ ನಂದಾ ಹೇಳಿದ್ದಾರೆ.

ನಿನ್ನೆ ಒಂದೇ 88 ಹೊಸ ಪ್ರಕರಣಗಳು
ಇನ್ನು ನಿನ್ನೆ ಒಂದೇ ದಿನದಲ್ಲಿ 88 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 696ಕ್ಕೇರಿಕೆಯಾಗಿದೆ. ಈ ಪೈಕಿ 47 ವಿದೇಶಿಯರು ಸೇರಿದ್ದಾರೆ. ಇನ್ನು ಸೋಂಕಿತರ ಪೈಕಿ 42 ಮಂದಿ ಗುಣಮುಖರಾಗಿದ್ದು, 16 ಮಂದಿ ಸಾವನ್ನಪ್ಪಿದ್ದಾರೆ.  ಇನ್ನು ಕೇರಳದಲ್ಲಿ ನಿನ್ನೆ 19 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಕೇರಳದಲ್ಲಿ ಕೊರೋನಾ ವೈರಸ್ ಗೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 126ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಮೂರು ಹೊಸ ಪ್ರಕರಣಗಳು ದಾಖಲಾಗಿದ್ದು, 125 ಮಂದಿ ವೈರಸ್ ಗೆ ಚಿಕಿತ್ಸೆ  ಪಡೆಯುತ್ತಿದ್ದಾರೆ. 

2 ದಿನಗಳ ಹಿಂದೆ ವೈರಸ್ ನಿಯಂತ್ರಣಕ್ಕೆ ಪ್ರಧಾನಿ ಮೋದಿ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿದ್ದರು. ಆದರೆ ಲಾಕ್ ಡೌನ್ ಗೆ ಜನರು ಜವಾಬ್ದಾರಿಯುತವಾಗಿ ವರ್ತಿಸದ ಕಾರಣ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಇದು ವೈದ್ಯರು ಮತ್ತು  ಪೊಲೀಸರ ತಲೆನೋವಿಗೆ ಕಾರಣವಾಗಿದೆ.

SCROLL FOR NEXT