ದೇಶ

ಕೊವಿಡ್-19ಗೆ ತೆಲಂಗಾಣದಲ್ಲಿ ಮೊದಲ ಬಲಿ, ದೇಶಾದ್ಯಂತ ಸಾವಿನ ಸಂಖ್ಯೆ 21ಕ್ಕೆ ಏರಿಕೆ, 900ಕ್ಕೂ ಹೆಚ್ಚು ಸೋಂಕಿತರು

Lingaraj Badiger

ಬೆಂಗಳೂರು: ದೇಶದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಇಷ್ಟು ದಿನ ಸೋಂಕಿತರ ಜನರಷ್ಟೇ ಕಂಡುಬರುತ್ತಿದ್ದ ತೆಲಂಗಾಣ ಮತ್ತು ಕೇರಳದಲ್ಲಿ ಇದೇ ಮೊದಲ ಬಾರಿಗೆ ಮಹಾಮಾರಿಗೆ ವ್ಯಕ್ತಿಗಳಿಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ದೇಶಾದ್ಯಂತ ಸಾವಿನ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.

60 ದಿನಗಳ ನಂತರ ಕೇರಳದಲ್ಲಿ ಒಬ್ಬ ವ್ಯಕ್ತಿ ಮತ್ತು ತೆಲಂಗಾಣದಲ್ಲಿ ಒಬ್ಬ ವ್ಯಕ್ತಿ ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ.

ಇನ್ನು ಕರ್ನಾಟದಲ್ಲಿ ಶನಿವಾರ ಒಂದೇ ದಿನ ಮತ್ತೆ 10 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೆ ಮತ್ತು ಸೋಂಕಿತರ ಸಂಖ್ಯೆ 944ಕ್ಕೆ ಏರಿಕೆಯಾಗಿದೆ. 

ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಮೂವರು ಮೃತಪಟ್ಟಿದ್ದು, ಐವರು ಗುಣಮುಖರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ 54 ವರ್ಷದ ಮಹಿಳೆ, 28 ವರ್ಷ ಮತ್ತು 23 ವರ್ಷದ ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದೆ.

ಇತ್ತೀಚೆಗೆ ಲಂಡನ್ ನಿಂದ ಮರಳಿದ್ದ ಬೆಂಗಳೂರಿನ 21 ವರ್ಷದ ಯುವಕನೋರ್ವನಲ್ಲಿ ಸೋಂಕು ಕಾಣಿಸಿಕೊಂಡಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೇ ಇಂದು ಐದು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಆಂಧ್ರಪ್ರದೇಶದ ಹಿಂದುಪುರದ 23 ವರ್ಷದ ಯುವಕ, 70 ವರ್ಷದ ವೃದ್ಧ, 32 ವರ್ಷದ ಮಹಿಳೆ, 38 ವರ್ಷದ ಪುರುಷ, 18 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದೆ.

ಇದರ ಜೊತೆಗೆ, ಲಂಡನ್ ನಿಂದ ಮರಳಿದ್ದ 63 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರಿಗೆ ವಿವಿಧ ಆಸ್ಪತ್ರೆಗಳ ಪ್ರತ್ಯೇಕಗೊಳಿಸಿದ ಕೊಠಡಿಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಕೇರಳದ ಎರ್ನಾಕುಲಂ ಜಿಲ್ಲೆಯ ಚುಲಿಕ್ಕಲ್ ಪ್ರದೇಶದಲ್ಲಿ 69 ವರ್ಷದ ವ್ಯಕ್ತಿಯೊಬ್ಬರು ಇಂದು ಮೃತಪಟ್ಟಿದ್ದಾರೆಂದು ವರದಿಗಳು ತಿಳಿಸಿವೆ. ಪ್ರಸ್ತುತ ಮೃತಪಟ್ಟಿರುವ ವ್ಯಕ್ತಿ ಮಾರ್ಚ್ 16 ರಂದು ದುಬೈನಿಂದ ಕೇರಳಕ್ಕೆ ಬಂದಿದ್ದರು.

ದುಬೈನಿಂದ ಬಂದಿದ್ದ ಈ ವ್ಯಕ್ತಿಯಲ್ಲಿ ಆರಂಭದಲ್ಲಿ ವೈರಸ್'ನ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಇದಾದ ಕೆಲವೇ ದಿನಗಳ ಬಳಿಕ ವ್ಯಕ್ತಿಯನ್ನು ಎರ್ನಾಕುಲಂನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಾರ್ಚ್ 22 ರಂದು ಪ್ರತ್ಯೇಕ ಕೊಠಡಿಯಲ್ಲಿಸಲಾಗಿತ್ತು. 

ಮೃತ ವ್ಯಕ್ತಿಗೆ ಹೃದಯ ಸಂಬಂಧಿ ಸಮಸ್ಯೆ ಹಾಗೂ ರಕ್ತದ ಒತ್ತಡ ಇತ್ತು ಎಂಬುದು ವೈದ್ಯಕೀಯ ವರದಿಗಳಿಂತ ತಿಳಿದುಬಂದಿದೆ. ಇದೀಗ ವ್ಯಕ್ತಿಯ 56 ವರ್ಷದ ಪತ್ನಿಯಲ್ಲೂ ವೈರಸ್ ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಈ ನಡುವೆ ಕರ್ನಾಟಕದಲ್ಲಿ ಮತ್ತೆ 10 ಹೊಸ ಪ್ರಕರಣಗಳು ಹಾಗೂ ತಮಿಳುನಾಡಿನಲ್ಲಿ ಮೂರು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 944ಕ್ಕೆ ಏರಿಕೆಯಾಗಿದೆ.

ಮಾರ್ಚ್ 24ರಂದು 70 ವರ್ಷ ಪ್ರಾಯದ ವೃದ್ಧೆಯೊಬ್ಬರು ತೀವ್ರ ಅಸ್ವಸ್ಥರಾಗಿ ಮೃತಪಟ್ಟಿದ್ದರು. ಬಳಿಕ ಅವರಲ್ಲಿ ಕೊವಿಡ್ 19 ಸೋಂಕು ಇರುವುದು ದೃಢಪಟ್ಟಿತ್ತು.

ಕೊವಿಡ್ 19 ಸೋಂಕು ದೃಢಪಟ್ಟ ಮೂವರನ್ನು ಸಂಪರ್ಕಿಸಿದ ಒಟ್ಟು 22 ಮಂದಿಯನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಈ ಪೈಕಿ ಐವರಲ್ಲಿ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಆರ್. ಲತಾ ತಿಳಿಸಿದ್ದಾರೆ.

ಸೋಂಕಿತರೆಲ್ಲರನ್ನೂ ಹಳೆಯ ಜಿಲ್ಲಾ ಆಸ್ಪತ್ರೆ ಕಟ್ಟಡದಲ್ಲಿ ಪ್ರತ್ಯೇಕ ವಾರ್ಡ್‌ಗಳಿಗೆ ಸ್ಥಳಾಂತರಿಸಲಾಗಿದೆ.

ಮೊದಲ ಪಾಸಿಟಿವ್ ಪ್ರಕರಣ ಮಾರ್ಚ್ 21 ರಂದು ವರದಿಯಾಗಿದ್ದರೆ, ಎರಡನೆಯದು ಮತ್ತು ಮೂರನೆಯದು ಮಾರ್ಚ್ 23 ಮತ್ತು 24 ರಂದು ವರದಿಯಾಗಿತ್ತು ಈ ಮೂವರೂ ಮೆಕ್ಕಾದಿಂದ ಹಿಂದಿರುಗಿದ್ದರು.

ಆಂಧ್ರಪ್ರದೇಶದ ಹಿಂದೂಪುರ ಮೂಲದ ವೃದ್ಧ ಮಹಿಳೆ ತನ್ನ ಮಗನನ್ನು ನೋಡಲು ಗೌರಿಬಿದನೂರಿಗೆ ಬಂದಿದ್ದರು. ಅನಾರೋಗ್ಯಕ್ಕೆ ಒಳಗಾದ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ನಂತರ ಅವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಎದೆ ರೋಗಗಳ ಆಸ್ಪತ್ರೆ (ಆರ್‌ಜಿಐಸಿಡಿ)ಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದರು.

ಅವರಲ್ಲಿ ಇಬ್ಬರು ಆರ್‌ಜಿಐಸಿಡಿಯಲ್ಲಿ ಚೇತರಿಸಿಕೊಳ್ಳುತ್ತಿದ್ದರೆ, ಮೂರನೆಯವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

SCROLL FOR NEXT