ದೇಶ

ಕೊರೋನಾ ಎಫೆಕ್ಟ್: ಕಾರ್ಮಿಕರ ವಲಸೆ ತಡೆಗೆ ತೆಗೆದುಕೊಂಡ ಕ್ರಮಗಳ ಕುರಿತು ವರದಿ ಕೊಡಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್

Raghavendra Adiga

ನವದೆಹಲಿ: ಕೊರೋನಾವೈರಸ್ ಹಾವಳಿಯ ಕಾರಣ ದೇಶಾದ್ಯಂತ ಲಾಕ್ ಡೌನ್  ಮಧ್ಯೆ ನಗರಗಳಿಂದ ತಮ್ಮ  ಹಳ್ಳಿಗಳಿಗೆ ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರು ವಲಸೆ ಹೊರಟಿದ್ದಾರೆ.ಈ ಬಗೆಗೆ ಸರ್ಕಾರ ಯಾವ ಬಗೆಯ ಕ್ರಮಗಳನ್ನು ಕೈಗೊಂಡಿದೆ ಎಂದು  ಸುಪ್ರೀಂ ಕೋರ್ಟ್ ಕೇಂದ್ರದಿಂದ ಸ್ಥಿತಿ ವರದಿಯನ್ನು ಕೇಳಿದೆ.

ಕೊರೋನಾವೈರಸ್ ಕಾರಣ  ಕಾರ್ಮಿಕರು ಭಯದಿಂದ ವಲಸೆ ಹೋಗುತ್ತಿರುವುದು ದೊಡ್ಡ ಸಮಸ್ಯೆಯಾಗುತ್ತಿದೆ ಎಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಸಮಸ್ಯೆಯನ್ನು ಎದುರಿಸಲು ಸರ್ಕಾರ ಈಗಾಗಲೇ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ತಿಳಿಸಬೇಕೆಂದು ನ್ಯಾಯಾಲಯ ಕೇಂದ್ರಕ್ಕೆ ಕೇಳಿದೆ.

ವಿಡಿಯೋ-ಕಾನ್ಫರೆನ್ಸಿಂಗ್ ಮೂಲಕ ಕಾರ್ಮಿಕರ ವಲಸೆ ವಿಚಾರದಲ್ಲಿ ವಕೀಲರಾದ ಅಲಖ್ ಅಲೋಕ್ ಶ್ರೀವಾಸ್ತವ ಮತ್ತು ರಶ್ಮಿ ಬನ್ಸಾಲ್ ಅವರು ಸಲ್ಲಿಸಿದ್ದ ಎರಡು ಪ್ರತ್ಯೇಕ ಪಿಐಎಲ್‌ಗಳನ್ನು ವಿಚಾರಣೆಗೆ ತೆಗೆದುಕೊಂಡ  ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಮತ್ತು ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ಅವರ ನ್ಯಾಯಪೀಠ, ಯಾವುದೇ ನಿರ್ದೇಶನವನ್ನು  ನೀಡುವ ಮುನ್ನ ಕೇಂದ್ರದಿಂದ ಸ್ಥಿತಿ ವರದಿಗಾಗಿ ನಿರೀಕ್ಷಿಸುತ್ತೇವೆ ಎಂದಿದೆ.

ಕೇಂದ್ರ ಸರ್ಕಾರದ ಪರ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವೈರಸ್ ಹರಡುವುದನ್ನು ತಡೆಗಟ್ಟಲು ಕಾರ್ಮಿಕರ ವಲಸೆಯನ್ನು ನಿಲ್ಲಿಸಬೇಕಾಗಿದೆ ಮತ್ತು ಕೇಂದ್ರ ಮತ್ತು ಸಂಬಂಧಪಟ್ಟ ರಾಜ್ಯಗಳು ಇದನ್ನು ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿ ಎಂದರು.

ಇದೇ ವೇಳೆ ವಿಚಾರಣೆಯನ್ನು ಮಂಗಳವಾರಕ್ಕೆ ನ್ಯಾಯಾಲಯ ಮುಂದುಡಿದೆ.

SCROLL FOR NEXT