ದೇಶ

ಅಮಾನವೀಯ ಘಟನೆ: ಕೊರೋನಾ ಭೀತಿಯಿಂದ ಊರಿಗೆ ಬಂದ ಕಾರ್ಮಿಕರಿಗೆ ಕೆಮಿಕಲ್ ಸ್ಪ್ರೇ, ವಿಡಿಯೋ ವೈರಲ್!

Lingaraj Badiger

ಲಖನೌ: ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ 21 ದಿನಗಳ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಇದರಿಂದ ಕಂಗೆಟ್ಟ ವಲಸೆ ಕಾರ್ಮಿಕರು ಭೀತಿಯಿಂದ ತಮ್ಮ ತಮ್ಮ ಊರಿಗೆ ತೆರಳುತ್ತಿದ್ದಾರೆ. ಹೀಗೆ ದೆಹಲಿಯಿಂದ ಉತ್ತರ ಪ್ರದೇಶದ ಬರೇಲಿಗೆ ಆಗಮಿಸಿದ ವಲಸೆ ಕಾರ್ಮಿಕರನ್ನು ರಸ್ತೆಯಲ್ಲೆ ಸಾಮೂಹಿಕವಾಗಿ ಕೆಮಿಕಲ್ ಸ್ಪ್ರೇ ಮಾಡಿದ ಅಮಾನವೀಯ ಘಟನೆ ಸೋಮವಾರ ನಡೆದಿದೆ.

ಬರೇಲಿ ಸಮೀಪ ಆಗಮಿಸಿದ ನೂರಾರು ಕಾರ್ಮಿಕರನ್ನು ತಡೆದ ಅಧಿಕಾರಿಗಳು, ಅವರನ್ನು ರಸ್ತೆಯಲ್ಲೇ ಕುಳಿತುಕೊಳ್ಳುವಂತೆ ಮಾಡಿ, ಬಟ್ಟೆ ಮತ್ತು ವಸ್ತುಗಳ ಸಮೇತ ಸ್ಯಾನಿಟೈಸರ್ ಮೂಲಕ ಸ್ನಾನ ಮಾಡಿಸಲಾಗಿದೆ.

ಕೊರೋನಾ ಸೋಂಕು ತಡೆಯುವುದಕ್ಕಾಗಿ ನಾವು ಹೀಗೆ ಮಾಡಿದ್ದೇವೆ ಎಂದು ಅಧಿಕಾರಿಗಳು ತಮ್ಮ ಅಮಾನವೀಯ ಕೃತ್ಯ ಸಮರ್ಥಿಸಿಕೊಂಡಿದ್ದು, ಅವರನ್ನು ಸ್ಯಾನಿಟೈಸರ್ ಮಾಡಿದ ಬಳಿಕ ಜಿಲ್ಲಾ ಗಡಿ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಆದರೆ ಹೀಗೆ ಸ್ಪ್ರೇ ಮಾಡುವುದರಿಂದ ಕಾರ್ಮಿಕರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.

ನಾವು ಸುಮಾರು 50 ಜನ ಆಹಾರ ಮತ್ತು ಬಸ್ ಗಾಗಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದೇವೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ನಮ್ಮ ಮೇಲ ಸ್ಪ್ರೇ ಮಾಡಲು ಆರಂಭಿಸಿದರು. ನಿಮಗೆ ಸ್ಯಾನಿಟೈಸರ್ ಮಾಡಿಸುತ್ತಿದ್ದೇವೆ ಎಂದು ಅವರು ಹೇಳಿದರು. ಅಧಿಕಾರಿಗಳ ಈ ಕ್ರಮದಿಂದ ಮಕ್ಕಳು ಅಳಲು ಆರಂಭಿಸಿದವು ಎಂದು ಮೊಹ್ಮದ್ ಅಪ್ಜಲ್ ಎಂಬ ಕಾರ್ಮಿಕ ಹೇಳಿದ್ದಾರೆ.

SCROLL FOR NEXT