ದೇಶ

ವಲಸೆ ಕಾರ್ಮಿಕರ ರವಾನೆ: 'ಎಂತಹ ಮೂರ್ಖ ಸರ್ಕಾರ' ಎಂದ ಸುಬ್ರಮಣಿಯನ್ ಸ್ವಾಮಿ

Srinivasamurthy VN

ನವದೆಹಲಿ: ಮಾರಕ ಕೊರೋನಾ ವೈರಸ್ ಆರ್ಭಟದ ನಡುವೆಯೇ ವಲಸೆ ಕಾರ್ಮಿಕರ ರವಾನೆ ವಿಚಾರ ಭಾರಿ ಸುದ್ದಿಗೆ ಗ್ರಾಸವಾಗುತ್ತಿದ್ದು, ಇದೇ ವಿಚಾರವಾಗಿ ಬಿಜೆಪಿ ನಾಯಕ ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯ ತಮ್ಮದೇ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಹೌದು.. ವಲಸೆ ಕಾರ್ಮಿಕರ ರವಾನೆ ವಿಚಾರವಾಗಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಟ್ವಿಟರ್ ನಲ್ಲಿ ಟೀಕೆ ಮಾಡಿದ್ದು, ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ಉಚಿತ ವಿಮಾನ ಸೇವೆ ನೀಡುವ ಸರ್ಕಾರ ದೇಶದಲ್ಲಿರುವ ವಲಸೆ ಕಾರ್ಮಿಕರ ರವಾನೆಗೆ ಟಿಕೆಟ್ ದರ ಪಡೆಯುತ್ತಿದೆ. ಎಂತಹ ಮೂರ್ಖ ಸರ್ಕಾರ ಎಂದು ಟೀಕಿಸಿದ್ದಾರೆ.

ಅಂತೆಯೇ ಕಾರ್ಮಿಕರ ಸಂಚಾರಿ ವೆಚ್ಚವನ್ನು ರೈಲ್ವೇ ಇಲಾಖೆ ಭರಿಸದಿದ್ದರೆ, ಪಿಎಂ ಕೇರ್ಸ್ ಫಂಡ್ ಏಕೆ ಭರಿಸಬಾರದು ಎಂದು ಕೇಳಿದ್ದಾರೆ. ಇದೇ ವಿಚಾರವಾಗಿ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಚರ್ಚೆ ಮಾಡಿದ್ದು, ಅವರು ಕಾರ್ಮಿಕರ ಸಂಚಾರಿ ವೆಚ್ಚದ ಶೇ.85ರಷ್ಟು ಹಣವನ್ನು ಕೇಂದ್ರ ಸರ್ಕಾರ ಮತ್ತು ಶೇ.15ರಷ್ಟು ಹಣವನ್ನು ರಾಜ್ಯ ಸರ್ಕಾರಗಳು ಭರಿಸಲಿವೆ ಎಂದು ಭರವಸೆ ನೀಡಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ಧ ಟೀಕೆ
ಅಂತೆಯೇ ಇದೇ ವೇಳೆ ಕೇಂದ್ರ ಸರ್ಕಾರದ ಈ ನಡೆಗೆ ಕಾಂಗ್ರೆಸ್ ಕಾರಣ ಎಂದು ನೇರ ಟೀಕೆ ಮಾಡಿರುವ ಸ್ವಾಮಿ, ಇಂದಿಗೂ ಸರ್ಕಾರದ ಹಲವು ಇಲಾಖೆಗಳಲ್ಲಿ ಕಾಂಗ್ರೆಸ್ ಪರ ಒಲವಿರುವ ಹಲವು ಅಧಿಕಾರಿಗಳು ಇದ್ದಾರೆ. ಅವರೇ ಇಲಾಖೆಗಳನ್ನು ನಿಯಂತ್ರಿಸುತ್ತಿದ್ದಾರೆ. ಇಂತಹ ಅಧಿಕಾರಿಗಳನ್ನು ಮೊದಲು ಎತ್ತಂಗಡಿ ಮಾಡಬೇಕು ಈ ಬಗ್ಗೆ ಮೊದಲೇ ನಾನು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೆ ಎಂದು ಹೇಳಿದ್ದಾರೆ.

SCROLL FOR NEXT