ದೇಶ

ವಿದೇಶಗಳಲ್ಲಿ ಸಿಲುಕಿರುವ ಭಾರತೀಯರ ಕರೆತರಲು 64 ವಿಮಾನ, ಲಂಡನ್-ದೆಹಲಿ ಟಿಕೆಟ್ ಗೆ 50 ಸಾವಿರ

Lingaraj Badiger

ನವದೆಹಲಿ: ಕೊರೋನಾ ಮಹಾಮಾರಿ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ಪರಿಣಾಮ ವಿದೇಶಗಳಲ್ಲಿ ಸಿಲುಕಿರುವ ಸುಮಾರು 15 ಸಾವಿರ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೇಂದ್ರ ಸರ್ಕಾರ  ಮುಂದಾಗಿದ್ದು, ಲಂಡನ್- ದೆಹಲಿ ಪ್ರಯಾಣಕ್ಕೆ ತಲಾ 50 ಸಾವಿರ ರೂಪಾಯಿ ಚಾರ್ಜ್ ಮಾಡಲಾಗುತ್ತಿದೆ.

ಮೇ 7ರಿಂದ 13ರ ವರೆಗೆ ಏರ್ ಇಂಡಿಯಾದ 64 ವಿಮಾನಗಳು ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲಿವೆ ಎಂದು ನಾಗರಿ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಹೇಳಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿದ ಪುರಿ, ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ಚಾರ್ಜ್ ಮಾಡಲಾಗುತ್ತಿದ್ದು, ಲಂಡನ್ - ದೆಹಲಿ ವಿಮಾನ ಪ್ರಯಾಣಕ್ಕೆ 50 ಸಾವಿರ, ಢಾಕಾ-ದೆಹಲಿ ಪ್ರಯಾಣಕ್ಕೆ 12 ಸಾವಿರ ಟಿಕಿಟ್ ದರ ನಿಗದಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರಯಾಣಕ್ಕೂ ಮುನ್ನ ಎಲ್ಲಾ ಪ್ರಯಾಣಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಾಲಗುವುದು ಮತ್ತು ಇಲ್ಲಿಗೆ ಬಂದ ನಂತರ 14 ದಿನಗಳ ಕಾಲ ಕ್ವಾರಂಟೈನ್ ಒಳಪಡಿಸಲಾಗುವುದು ಎಂದು ಪುರಿ ಹೇಳಿದ್ದಾರೆ.

ಯುಎಇ, ಅಮೆರಿಕ, ಇಂಗ್ಲೆಂಡ್, ಮಲೇಷ್ಯಾ, ಸಿಂಗಾಪುರ್, ಫಿಲಿಪ್ಪಿನ್ಸ್, ಸೌದಿ ಅರೇಬಿಯಾ, ಕತಾರ್, ಬಾಂಗ್ಲಾದೇಶ, ಬಹ್ರೇನ್, ಕುವೈತ್ ಮತ್ತಿತ್ತರ ದೇಶಗಳಿಂದ ಅನಿವಾಸಿ ಭಾರತೀಯರನ್ನು ಕರೆತರಬೇಕಿದೆ. ಇನ್ನು ಯುಎಇ ಮತ್ತು ಮಾಲ್ಡೀವ್ಸ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಇಂದು ನೌಕಾಸೇನೆಯ 3 ಹಡಗುಗಳನ್ನು ಕಳುಹಿಸಲಾಗಿದೆ.

SCROLL FOR NEXT