ದೇಶ

ಪುಲ್ವಾಮದಲ್ಲಿ ಎರಡು ಕಡೆ ಗುಂಡಿನ ಚಕಮಕಿ, ಉಗ್ರ ಸಂಘಟನೆಯ ಹಿರಿಯ ಕಮಾಂಡರ್ ಸೇರಿ 4 ಉಗ್ರರು ಹತ

Srinivasamurthy VN

ಶ್ರೀನಗರ: ದಕ್ಷಿಣ ಕಾಶ್ಮೀರ ಜಿಲ್ಲೆಯಾದ ಪುಲ್ವಾಮಾದಲ್ಲಿ ಬುಧವಾರ ಭದ್ರತಾ ಪಡೆಗಳು ನಡೆಸಿದ ಎರಡು ಪ್ರತ್ಯೇಕ ಶೋಧ ಕಾರ್ಯಾಚರಣೆ (ಸಿಎಎಸ್‌ಒ)ಗಳಲ್ಲಿ ಉಗ್ರ ಸಂಘಟನೆಯ ಹಿರಿಯ ಕಮಾಂಡರ್ ಸೇರಿ 4 ಉಗ್ರರು ಹತರಾಗಿದ್ದಾರೆ.

ಕಳೆದ ರಾತ್ರಿ ಉಗ್ರರು ಅಡಗಿರುವ ಬಗ್ಗೆ ನಂಬಲರ್ಹ ಮಾಹಿತಿಯನ್ನಾಧರಿಸಿ, ಎರಡನೇ ಶೋಧ ಕಾರ್ಯಾಚರಣೆಯನ್ನು ಅವಂತಿಪೋರಾದ ಬೀಗ್‍ಪೋರದಲ್ಲಿ ಭಾರತೀಯ ಸೇನೆ ಆರಂಭಿಸಿತ್ತು. ಬುಧವಾರ ಬೆಳಿಗ್ಗೆ ಉಗ್ರರೊಂದಿಗೆ ಮುಖಾಮುಖಿಯಾಗಿದ್ದು, ಈ ಪ್ರದೇಶದಲ್ಲಿ ಉಗ್ರ  ಸಂಘಟನೆಯ ಉನ್ನತ ಕಮಾಂಡರ್ ರಿಯಾಜ್ ನೈಕೂ ಕೂಡ ಇದ್ದ ಎಂದು ಹೇಳಲಾಗಿತ್ತು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಹಿಜ್ಬುಲ್ ಉಗ್ರ ಸಂಘಟನೆಯ ಕಮಾಂಡರ್ ರಿಯಾಜ್ ನೈಕೂ ಸೇರಿದಂತೆ 4 ಉಗ್ರರು ಹತರಾಗಿದ್ದಾರೆ. ಮೃತ ಉಗ್ರರ ಗುರುತು ಪತ್ತೆ ಕಾರ್ಯ  ನಡೆಸಲಗುತ್ತಿದೆ.

ಮತ್ತೊಂದು ಘಟನೆಯಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಜಮ್ಮು-ಕಾಶ್ಮೀರ ಪೊಲೀಸ್, ಸೇನೆ ಮತ್ತು ಸಿಆರ್‍ ಪಿಎಫ್‍ ಮತ್ತು ವಿಶೇಷ ಕಾರ್ಯಾಚರಣೆ ತಂಡ (ಎಸ್ಒಜಿ) ಜಂಟಿಯಾಗಿ ಪುಲ್ವಾಮಾದ ಅವಂತಿಪೋರಾದ ಶರ್ಸಾಲಿ ಗ್ರಾಮದಲ್ಲಿ ನಿನ್ನೆ ರಾತ್ರಿ  ಕಾರ್ಯಾಚರಣೆ ಆರಂಭಿಸಿದ್ದವು ಸೇನಾಧಿಕಾರಿ ಹೇಳಿದ್ದಾರೆ.

ಭದ್ರತಾ ಪಡೆಗಳು ಒಂದು ನಿರ್ದಿಷ್ಟ ಪ್ರದೇಶವನ್ನು ಸುತ್ತುವರಿದಾಗ ಅಡಗಿ ಕುಳಿತಿದ್ದ ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದ್ದು, ಈ ವೇಳೆ ನಡೆದ ಪರಸ್ಪರ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.  ಶ್ರೀನಗರ ಸೇರಿದಂತೆ ಕಣಿವೆಯ ಅನೇಕ  ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಭದ್ರತಾ ಪಡೆಗಳು ಧ್ವನಿವರ್ಧಕಗಳ ಮೂಲಕ ಪ್ರಕಟ ಮಾಡುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅವಂತಿಪೋರದ ಬೀಗ್‍ಪೋರದಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಮಾಧ್ಯಮಗಳು ಊಹಾಪೋಹ ಸುದ್ದಿಗಳನ್ನು ಪ್ರಸಾರ ಮಾಡದಂತೆ ಸೂಚಿಸಲಾಗಿದೆ. ಇಂತಹ ಸುದ್ದಿಗಳಿಂದ ಕಾನೂನು ಸುವ್ಯವಸ್ಥೆಗೆ ಭಂಗವಾಗುವ ಸಾಧ್ಯತೆ ಇರುವುದರಿಂದ ಮಾಧ್ಯಮಗಳು ಜವಾಬ್ದಾರಿಯುತವಾಗಿ  ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಭದ್ರತಾ ಕಾರಣಗಳಿಂದ ಕಾಶ್ಮೀರ ಕಣಿವೆಯಲ್ಲಿ ಬುಧವಾರ ಬಿಎಸ್ಎನ್ಎಲ್ ಸೇರಿದಂತೆ ಎಲ್ಲಾ ಮೊಬೈಲ್‍  ಕಂಪನಿಗಳ ಮೊಬೈಲ್ ಇಂಟರ್ ನೆಟ್‍ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು,  ಶ್ರೀನಗರದ ಡೌನ್‍ಟೌನ್‍ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.

SCROLL FOR NEXT