ದೇಶ

ವಿಷಾನಿಲ ಸೋರಿಕೆ ತಡೆಯಲಾಗಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ: ಆಂಧ್ರ ಪ್ರದೇಶ ಡಿಜಿಪಿ

Srinivasamurthy VN

ವಿಶಾಖಪಟ್ಟಣ: ವಿಶಾಖಪಟ್ಟಣಂನಲ್ಲಿನ ಎಲ್ ಜಿ ಪಾಲಿಮರ್ಸ್ ಇಂಡಸ್ಚ್ಟ್ರೀ ಕಾರ್ಖಾನೆಯಿಂದ ಸೋರಿಕೆಯಾಗುತ್ತಿದ್ದ ವಿಷಾನಿಲವನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಂಧ್ರ ಪ್ರದೇಶ ಡಿಜಿಪಿ ಗೌತಮ್ ಸವಾಂಗ್ ಹೇಳಿದ್ದಾರೆ.

ವಿಶಾಖಪಟ್ಟಣ ವಿಷಾನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಜಿಪಿ ಗೌತಮ್ ಸಾವಂಗ್ ಅವರು, 'ವಿಶಾಖಪಟ್ಟಣ ವಿಷಾನಿಲ ಸೋರಿಕೆ ಪ್ರಕರಣ ಗಂಭೀರವಾಗಿದ್ದಾದರೂ ಪ್ರಸ್ತುತ ಪರಿಸ್ಥಿತಿ ನಿಯಂತ್ರದಲ್ಲಿದೆ. ವಿಷಾನಿಲ ಸೋರಿಕೆಯಿಂದಾಗಿ  ಕಾರ್ಖಾನೆಯ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿರುವ 9 ಹಳ್ಳಿಗಳಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಅಸ್ವಸ್ಥರಾಗಿರುವವರ ಪೈಕಿ ಬಹುತೇಕ ಮಂದಿ ಇದೇ ಎಲ್ ಜಿ ಪಾಲಿಮರ್ಸ್ ಕಾರ್ಖಾನೆಯ ನೌಕರರಾಗಿದ್ದಾರೆ. ಬಹುತೇಕ ಮಂದಿ ಸುತ್ತಮುತ್ತಲಿನ ನಿವಾಸಿಗಳೇ ಆಗಿದ್ದು,  ಎಲ್ಲರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಕೇಂದ್ರ ವಿಪತ್ತು ನಿರ್ವಹಣಾ ದಳ (ಎನ್ ಡಿಆರ್ ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ದಳ (ಎಸ್ ಡಿ ಆರ್ ಎಫ್) ಸಿಬ್ಬಂದಿಗಳು ಕೈ ಜೋಡಿಸಿದ್ದರು ಎಂದು ಹೇಳಿದ್ದಾರೆ.

ಅಂತೆಯೇ ಈ ವರೆಗೂ ಸುಮಾರು 1500ಕ್ಕೂ ಅಧಿಕ ಅಸ್ವಸ್ಥರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಪೈಕಿ ಹಲವು ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಆಗಿದ್ದಾರೆ. ಅಸ್ವಸ್ಥರ ರವಾನೆ ಇಲಾಖೆ ವಾಹನಗಳು ಮಾತ್ರವಲ್ಲದೇ ರಾಜ್ಯ ಸಾರಿಗೆ ಇಲಾಖೆಯ ಬಸ್ ಗಳನ್ನೂ  ಕೂಡ ಬಳಸಿಕೊಳ್ಳಲಾಗಿತ್ತು ಎಂದು ಹೇಳಿದರು.

2ನೇ ಸೋರಿಕೆ ವರದಿ ಸುಳ್ಳು
ಇದೇ ವೇಳೆ ಎಲ್ ಜಿ ಪಾಲಿಮರ್ಸ್ ಕಾರ್ಖಾನೆಯಿಂದ 2ನೇ ಸೋರಿಕೆಯ ಕುರಿತು ಸ್ಥಳೀಯ ವ್ಯಕ್ತಪಡಿಸಿರುವ ಆತಂಕದ ಕುರಿತು ಮಾತನಾಡಿದ ಅವರು, 2ನೇ ಸೋರಿಕೆಯಾಗಿಲ್ಲ. ಇಂತಹ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಹೇಳಿದರು. 

SCROLL FOR NEXT