ದೇಶ

ಔರಂಗಾಬಾದ್: ಹಳಿ ಮೇಲೆ ಮಲಗಿದ್ದವರ ಮೇಲೆ ಗೂಡ್ಸ್ ರೈಲು ಹರಿದು 16 ಮಂದಿ ವಲಸೆ ಕಾರ್ಮಿಕರ ಸಾವು

Sumana Upadhyaya

ಔರಂಗಾಬಾದ್: ವಲಸೆ ಕಾರ್ಮಿಕರು ಊರಿಗೆ ಹೋಗುವ ಸಮಸ್ಯೆ ದೇಶಾದ್ಯಂತ ಇರುವ ಸಮಯದಲ್ಲಿ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಗೂಡ್ಸ್ ರೈಲು ಹಳಿ ಮೇಲೆ ಹರಿದು 16 ಮಂದಿ ವಲಸೆ ಕಾರ್ಮಿಕರು ಮೃತಪಟ್ಟು ಐವರು ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಔರಂಗಾಬಾದ್ ನ ಕರ್ಮಡ್ ಪೊಲೀಸ್ ಠಾಣೆ ಸರಹದ್ದಿನ ಪರ್ಬನಿ-ಮನ್ಮಡ್ ವಲಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಗೂಡ್ಸ್ ರೈಲು ಜಲ್ನಾದಿಂದ ಔರಂಗಾಬಾದ್ ಕಡೆಗೆ ಸಂಚರಿಸುತ್ತಿತ್ತು. ಛತ್ತೀಸ್ ಗಢ ಮೂಲಕ ವಲಸೆ ಕಾರ್ಮಿಕರು ಹಳಿ ಮೇಲೆ ಏಕೆ ಮಲಗಿದ್ದರು ಎಂಬ ಬಗ್ಗೆ ಮತ್ತು ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಔರಂಗಾಬಾದ್ ಎಸ್ಪಿ ಮೊಕ್ಷಡ ಪಾಟೀಲ್ ತಿಳಿಸಿದ್ದಾರೆ.

ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳೀಯ ಪೊಲೀಸರು ಮತ್ತು ರೈಲ್ವೆ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿದ್ದು ಪರಿಸ್ಥಿತಿ ಪರಾಮರ್ಶೆ ನಡೆಸುತ್ತಿದೆ. ಹೆಚ್ಚಿನ ಮಾಹಿತಿ ಸಿಗಬೇಕಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ರೈಲ್ವೆ ಸಚಿವಾಲಯ, ಹಳಿ ಮೇಲೆ ಕಾರ್ಮಿಕರು ಮಲಗಿರುವುದನ್ನು ಕಂಡು ಗೂಡ್ಸ್ ರೈಲಿನ ಲೊಕೊ ಪೈಲಟ್ ರೈಲನ್ನು ನಿಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಆಕಸ್ಮಿಕವಾಗಿ ರೈಲು ಕಾರ್ಮಿಕರ ದೇಹದ ಮೇಲೆ ಹರಿದುಹೋಯಿತು. ಈ ಬಗ್ಗೆ ತನಿಖೆಗೆ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದೆ.

ರೈಲು ಅಪಘಾತ ತೀವ್ರ ನೋವುಂಟುಮಾಡಿದ್ದು ಈ ಬಗ್ಗೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರ ಬಳಿ ಮಾತನಾಡಿದ್ದೇನೆ. ಸಂಬಂಧಪಟ್ಟ ಇಲಾಖೆಗಳ ಜೊತೆ ಸಂಪರ್ಕಿಸಿದ್ದು ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಪರಿಹಾರ: ಅಪಘಾತದಲ್ಲಿ ಮೃತಪಟ್ಟ ವಲಸೆ ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಕಾರ್ಯಾಲಯ ಘೋಷಿಸಿದೆ.

SCROLL FOR NEXT