ದೇಶ

ಚೆನ್ನೈ: ಶೀತಕ್ಕೆಂದು ತಾನೇ ಕಂಡುಹಿಡಿದಿದ್ದ ಔಷಧಿ ಸೇವಿಸಿ ಫಾರ್ಮಾಸಿಸ್ಟ್ ಸಾವು!

Srinivasamurthy VN

ಚೆನ್ನೈ: ಇಡೀ ವಿಶ್ವಾದ್ಯಂತ ವಿಜ್ಞಾನಿಗಳು ಕೊರೋನಾ ವೈರಸ್ ಗೆ ಔಷಧಿ ಹುಡುಕಲು ಹರಸಾಹಸ ಪಡುತ್ತಿದ್ದರೆ, ಅತ್ತ ಚೆನ್ನೈನಲ್ಲಿ ಓರ್ವ ಫಾರ್ಮಸಿಸ್ಟ್ ತಾನೇ ಕಂಡುಹಿಡಿದಿದ್ದ ಶೀತದ ಔಷಧ ಸೇವಿಸಿ ಸಾವನ್ನಪ್ಪಿದ್ದಾನೆ. 

ಚೆನ್ನೈ ಮೂಲದ 47 ವರ್ಷದ ಫಾರ್ಮಸಿಸ್ಡ್ ಶಿವನೇಸನ್ ತೀನಂಪೇಟ್ ನಲ್ಲಿ ಸಾವನ್ನಪ್ಪಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಶಿವನೇಸನ್ ಪೆರುಂಗುಡಿ ನಿವಾಸಿಯಾಗಿದ್ದು, ಫಾರ್ಮಸಿ ಪದವಿ ಹೊಂದಿದ್ದ ಈತ ಖಾಸಗಿ  ಬೈಯೋಟೆಕ್ ಸಂಸ್ಥೆಯಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಈ ಉತ್ತರಾಖಂಡ್ ನಲ್ಲಿ ಕೆಲಸ ಮಾಡುತ್ತಿದ್ದ ಈತ ಅದೇ ಸಂಸ್ಥೆಯ ಚೆನ್ನೈನ ಕೊಡಂಬಕ್ಕಂನ ಭೂಪತಿ ನಗರದ ಬ್ರಾಂಚ್ ಗೆ ವರ್ಗಾವಣೆಯಾಗಿದ್ದ. 

ಕಳೆದ ಹಲವು ತಿಂಗಳಿನಿಂದ ಈತ ಶೀತಕ್ಕೆ ಸಂಬಂಧಿಸಿದ ಔಷಧಿ ಕಂಡು ಹಿಡಿಯುವಲ್ಲಿ ನಿರತನಾಗಿದ್ದ. ಗುರುವಾರ ಸಂಜೆ ತಾನು ಕಂಡು ಹಿಡಿದಿದ್ದ ಔಷಧಿಯನ್ನು ತೇನಂಪೇಟ್ ನಲ್ಲಿರುವ ವೈದ್ಯ ಡಾ.ರಾಜ್ ಕುಮಾರ್ ಬಳಿಗೆ ತಂದಿದ್ದ. ಈ ವೇಳೆ ಔಷಧಿ ಪರೀಕ್ಷೆಗಾಗಿ ಶಿವನೇಸನ್ ಮತ್ತು  ವೈದ್ಯ ರಾಜ್ ಕುಮಾರ್ ಇಬ್ಬರೂ ಸೇವಿಸಿದ್ದರು. ವೈದ್ಯ ರಾಜ್ ಕುಮಾರ್ ಅಲ್ಪ ಪ್ರಮಾಣದ ಔಷಧ ಸೇವಿಸಿದರೆ, ಶಿವನೇಸನ್ ಇಡೀ ಔಷಧಿಯನ್ನು ಸೇವಿಸಿದ್ದ. ಔಷಧ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಶವನೇಸನ್ ಪ್ರಜ್ಞೆ ತಪ್ಪಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಷ್ಟು ಹೊತ್ತಿಗಾಗಲೇ ಶಿವನೇಸನ್ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ. 

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ತೇನಂಪೇಟ್ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮೃತ ಶಿವನೇಸನ್ ದೇಹವನ್ನು ಮರಣೋತ್ತರ ಪರೀಕ್ಷೆ ರವಾನಿಸಿದ್ದಾರೆ. ಅಂತೆಯೇ ಔಷಧಿ ತಯಾರಿಕೆಯಲ್ಲಿ ವೈದ್ಯ ರಾಜ್ ಕುಮಾರ್ ಪಾತ್ರದ ಕುರಿತು ಶಂಕಿಸಿದ್ದು, ಆತನ ಸಾವಿಗೆ ಸೋಡಿಯಂ ನೈಟ್ರೇಟ್ ಕಾರಣವಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

SCROLL FOR NEXT