ದೇಶ

ವಿಶೇಷ ರೈಲಿನಲ್ಲಿ ವಲಸೆ ಕಾರ್ಮಿಕರ ಮೃತದೇಹ ಮಧ್ಯಪ್ರದೇಶಕ್ಕೆ: ಔರಂಗಾಬಾದ್ ದುರ್ಘಟನೆ ತನಿಖೆಗೆ ಆದೇಶ

Sumana Upadhyaya

ಔರಂಗಾಬಾದ್: ಗೂಡ್ಸ್ ರೈಲು ಹರಿದು ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಮೃತಪಟ್ಟ 16 ಮಂದಿ ವಲಸೆ ಕಾರ್ಮಿಕರ ಮೃತದೇಹಗಳನ್ನು ವಿಶೇಷ ರೈಲಿನಲ್ಲಿ ಮಧ್ಯಪ್ರದೇಶಕ್ಕೆ ಕಳುಹಿಸಲಾಗಿದೆ.

ಜಲ್ನಾದಿಂದ ಔರಂಗಾಬಾದ್ ಗೆ ತೆರಳುತ್ತಿದ್ದ ಗೂಡ್ಸ್ ರೈಲು ಹಳಿ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಹರಿದು ನಿನ್ನೆ ನಸುಕಿನ ಜಾವ 16 ಮಂದಿ ವಲಸೆ ಕಾರ್ಮಿಕರು ಮೃತಪಟ್ಟು 5 ಮಂದಿ ಗಾಯಗೊಂಡಿದ್ದರು ಎಂದು ದಕ್ಷಿಣ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಗಾಯಗೊಂಡವರು ಔರಂಗಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಲಸೆ ಕೂಲಿ ಕಾರ್ಮಿಕರು ಮಧ್ಯಪ್ರದೇಶ ಮೂಲದವರಾಗಿದ್ದು ಲಾಕ್ ಡೌನ್ ಮಧ್ಯೆ ಕೆಲಸವೆಲ್ಲದೆ ತಮ್ಮೂರಿಗೆ ಹೊರಟಿದ್ದರು. ಮಹಾರಾಷ್ಟ್ರದ ಜಲ್ನಾ ಕಡೆಯಿಂದ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದು 36 ಕಿಲೋ ಮೀಟರ್ ನಡೆದುಕೊಂಡು ಹೋದ ಮೇಲೆ ನಸುಕಿನ ಜಾವ ದೇಹ ಬಳಲಿ ನಿದ್ದೆ ಬರುತ್ತಿದೆಯೆಂದು ರೈಲು ಹಳಿ ಮೇಲೆ ಮಲಗಿದ್ದರು. ಈ ಸಂದರ್ಭದಲ್ಲಿ ಬಂದ ಗೂಡ್ಸ್ ರೈಲು ಹರಿದು ಮೃತಪಟ್ಟಿದ್ದಾರೆ.

ಕೇಸು ದಾಖಲು: ಘಟನೆಗೆ ಸಂಬಂಧಿಸಿದಂತೆ ಆಕಸ್ಮಿಕ ಸಾವು ಎಂದು ಕೇಸು ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಔರಂಗಾಬಾದ್ ಜಿಲ್ಲಾಧಿಕಾರಿ ತನಿಖೆಗೆ ಆದೇಶ ನೀಡಿದ್ದಾರೆ ಎಂದು ಔರಂಗಾಬಾದ್ ಗ್ರಾಮಾಂತರ ಎಸ್ಪಿ ಮೊಕ್ಷಡ ಪಾಟೀಲ್ ತಿಳಿಸಿದ್ದಾರೆ.

SCROLL FOR NEXT