ದೇಶ

ಭಾರತದೊಂದಿಗೆ ಸಕಾರಾತ್ಮಕ ಸಂಬಂಧಕ್ಕೆ ತಾಲಿಬಾನ್ ಇಂಗಿತ: ಅಫ್ಘಾನ್ ಅಭಿವೃದ್ಧಿ ಸಹಕಾರಕ್ಕೆ ಸ್ವಾಗತ!

Srinivas Rao BV

ನವದೆಹಲಿ: ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನದ ತಾಲಿಬಾನ್ ಭಾರತದ ಹೆಸರು ಪ್ರಸ್ತಾಪಿಸಿ ಭಾರತದೊಂದಿಗೆ ಸಕಾರಾತ್ಮಕ ಸಂಬಂಧಕ್ಕೆ ಇಂಗಿತ ವ್ಯಕ್ತಪಡಿಸಿದೆ. 

ಜ್ಹೀ ನ್ಯೂಸ್ ವೆಬ್ ಸೈಟ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಆ ಮಾಧ್ಯಮ ಸಂಸ್ಥೆಯ ಪ್ರತಿನಿಧಿಗೆ ತಾಲಿಬಾನ್ ನ ರಾಜಕೀಯ ಕಚೇರಿ ವಕ್ತಾರರು ಹೇಳಿಕೆ ನೀಡಿದ್ದು, ಭಾರತದ ಜೊತೆಗೆ ಸಕಾರಾತ್ಮಕ ಸಂಬಂಧ ಹೊಂದಲು ತಾಲಿಬಾನ್ ಇಚ್ಛಿಸುತ್ತದೆ. ಅಫ್ಘಾನಿಸ್ತಾನದ ಅಭಿವೃದ್ಧಿಗೆ ನವದೆಹಲಿಯ ಸಹಕಾರವನ್ನು ಸ್ವಾಗತಿಸುತ್ತೇವೆ ಎಂದು ತಾಲಿಬಾನ್ ವಕ್ತಾರ ಸುಹೈಲ್ ಶಾಹೀನ್ ಹೇಳಿದ್ದಾರೆ. 

ರಾಷ್ಟ್ರೀಯ ಹಿತಾಸಕ್ತಿ ಹಾಗೂ ಪರಸ್ಪರ ಗೌರವದ ಆಧಾರದಲ್ಲಿ ನಾವು ಭಾರತವೂ ಸೇರಿದಂತೆ ಎಲ್ಲಾ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತೇವೆ. 

ಇಸ್ಲಾಮಿಕ್ ಎಮಿರೈಟ್ ಆಫ್ ಅಫ್ಘಾನಿಸ್ಥಾನ ಅಫ್ಘಾನಿಸ್ಥಾನದ ರಾಷ್ಟ್ರೀಯ ಇಸ್ಲಾಮಿಕ್ ಚಳುವಳಿಯಾಗಿದೆ ನಮ್ಮ ಗಡಿಯಾಚೆಗೆ ನಮಗೆ ಯಾವುದೇ ಅಜೆಂಡಾಗಳಿಲ್ಲ ಎಂದು ತಾಲಿಬಾನ್ ಹೇಳಿದೆ. 

ಅಫ್ಘಾನ್ ಶಾಂತಿ ಪ್ರಕ್ರಿಯೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತ ತಾಲಿಬಾನ್ ಜೊತೆ ಮಾತುಕತೆ ನಡೆಸಬೇಕೆಂದು ಅಮೆರಿಕ ಅಭಿಪ್ರಾಯ ವ್ಯಕ್ತಪಡಿಸಿರುವ ಬೆನ್ನಲ್ಲೇ ತಾಲಿಬಾನ್ ನಿಂದ ಈ ಹೇಳಿಕೆ ಬಂದಿರುವುದು ಮಹತ್ವ ಪಡೆದುಕೊಂಡಿದೆ. 

ಫೆ.29 ರಂದು ಅಮೆರಿಕ ತಾಲಿಬಾನ್ ಒಪ್ಪಂದವಾದ ನಂತರ ಇದೇ ಮೊದಲ ಬಾರಿಗೆ, ಕಳೆದ ವಾರ ಅಫ್ಘಾನಿಸ್ತಾನದಲ್ಲಿನ ಅಮೆರಿಕ ಪ್ರತಿನಿಧಿ ಭಾರತಕ್ಕೆ ಭೇಟಿ ನೀಡಿ, ವಿದೇಶಾಂಗ ಸಚಿವ ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆ ಮಾತುಕತೆ ನಡೆಸಿದ್ದರು.

SCROLL FOR NEXT