ದೇಶ

ಕೊರೋನಾ ವೈರಸ್: ದೇಶದಲ್ಲಿ ಮುಂದುವರೆದ ವಲಸೆ ಕಾರ್ಮಿಕರ ಸಾವಿನ ಸರಣಿ, ಮಹಾರಾಷ್ಟ್ರ-ಮಧ್ಯ ಪ್ರದೇಶ ಗಡಿಯಲ್ಲಿ ಮೂವರ ಸಾವು

Srinivasamurthy VN

ಬರ್ವಾನಿ: ಕೊರೋನಾ ವೈರಸ್ ಲಾಕ್ ಡೌನ್ ನಡುವೆಯೇ ದೇಶದಲ್ಲಿ ವಲಸೆ ಕಾರ್ಮಿಕರ ಸರಣಿ ಸಾವು ಪ್ರಕರಣಗಳು ಮುಂದುವರೆದಿದ್ದು, ಉತ್ತರ ಪ್ರದೇಶದತ್ತ ತೆರಳುತ್ತಿದ್ದ ಮೂವರು ವಲಸೆ ಕಾರ್ಮಿಕರು ಮಹಾರಾಷ್ಟ್ರ-ಮಧ್ಯ ಪ್ರದೇಶ ಗಡಿಯಲ್ಲಿ ಸಾವನ್ನಪ್ಪಿದ್ದಾರೆ.

ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಅತಂತ್ರ ಸ್ಥಿತಿಗೆ ಸಿಲುಕಿರುವ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳತ್ತ ತೆರಳುತ್ತಿದ್ದು, ಇದರ ನಡುವೆಯೇ ವಿವಿಧ ಪ್ರಕರಣಗಳಲ್ಲಿ ಹತ್ತಾರು ಕಾರ್ಮಿಕರು ಸಾವನ್ನಪ್ಪುತ್ತಿದ್ದಾರೆ. ಇತ್ತೀಚೆಗಷ್ಟೇ ಹಳಿ ಮೇಲೆ ಮಲಗಿದ್ದ 19 ಮಂದಿ ವಲಸೆ  ಕಾರ್ಮಿಕರ ಮೇಲೆ ರೈಲು ಹರಿದು ಸಾವನ್ನಪ್ಪಿದ್ದ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಇದರ ನಡುವೆಯೇ ಮಧ್ಯ ಪ್ರದೇಶದ ಬರ್ವಾನಿಯಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಬಸ್ ಸಂಚಾರ ಮತ್ತು ರೈಲು ಸಂಚಾರವಿಲ್ಲದೇ ಕಾರ್ಮಿಕರು ಕಾಲ್ನಡಿಗೆಯಲ್ಲೇ ತಮ್ಮ ತಮ್ಮ ಊರುಗಳತ್ತ ತೆರಳುತ್ತಿದ್ದು, ಈ ವೇಳೆ ಮಧ್ಯ ಪ್ರದೇಶದ ಬರ್ವಾನಿಯಲ್ಲಿ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಇನ್ನು ಮೃತದೇಹಗಳನ್ನು ಪರಿಶೀಲಿಸಿದ ವೈದ್ಯರು ಬೇಸಿಗೆಯಾದ್ದರಿಂದ ದೇಹದ  ನಿರ್ಜಲೀಕರಣವಾಗಿ ಆಯಾಸದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಮೃತರನ್ನು ಪ್ರಯಾಗರಾಜ್ ಜಿಲ್ಲೆಯ ಚುಡಿಯಾ ಗ್ರಾಮದ ನಿವಾಸಿ ಲಲ್ಲುರಾಮ್ (55), ಸಿದ್ಧಾರ್ಥ್ ನಗರದ ನಿವಾಸಿ ಪ್ರೇಮ್ ಬಹದ್ದೂರ್ (50) ಮತ್ತು ಫತೇಪುರದ ಹರ್ದಾಸ್ ಗಿರ್ಜಾ ಗ್ರಾಮದ ಅನೀಸ್ ಅಹ್ಮದ್  (42) ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಅವರು ಕುಟುಂಬಸ್ಥರಿಗೆ ರವಾನೆ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT