ದೇಶ

ಆಪರೇಷನ್ ಸಮುದ್ರ ಸೇತು: ಮಾಲ್ಡೀವ್ಸ್ ನಿಂದ 698 ಭಾರತೀಯರ ಕರೆತಂದ 'ಐಎನ್ಎಸ್ ಜಲಾಶ್ವ'

Srinivasamurthy VN

ಕೊಚ್ಚಿ: ಮಾಲ್ಡೀವ್ಸ್ ನಲ್ಲಿ ನಿರಾಶ್ರಿತರಾಗಿದ್ದ 698 ಮಂದಿ ಭಾರತೀಯರನ್ನು ಭಾರತೀಯ ನೌಕಾದಳದ ಯುದ್ಧ ನೌಕೆ 'ಐಎನ್ಎಸ್ ಜಲಾಶ್ವ' ಯಶಸ್ವಿಯಾಗಿ ಕರೆತಂದಿದ್ದು, ಇಂದು ಕೊಚ್ಚಿ ಬಂದರಿಗೆ ಬಂದು ಲಂಗರು ಹಾಕಿದೆ.

ಮಾಲ್ಡೀವ್ಸ್‌ನಿಂದ ಹೊರಟ ಐಎನ್‌ಎಸ್‌ ಜಲಾಶ್ವ ಭಾನುವಾರ ಬೆಳಗ್ಗೆ ಕೇರಳದ ಕೊಚ್ಚಿ ಬಂದರನ್ನು ತಲುಪಿದ್ದು, ಬರೋಬ್ಬರಿ 698 ಪ್ರಜೆಗಳು ತಾಯ್ನಾಡಿಗೆ ಮರಳಿದ್ದಾರೆ. ಇದರಲ್ಲಿ 400 ಮಂದಿ ಕೇರಳದವರಾಗಿದ್ದು, ಉಳಿದ 200 ಮಂದಿ ದೇಶದ ಇತರ ಭಾಗಕ್ಕೆ ಸೇರಿದವರಾಗಿದ್ದಾರೆ. ಈ  200 ಮಂದಿಯ ಪೈಕಿ 4 ಮಂದಿ ಲಕ್ಷ ದ್ವೀಪದವರಾಗಿದ್ದು, 187 ಮಂದಿ ತಮಿಳುನಾಡು ಮೂಲದವರಾಗಿದ್ದಾರೆ. ತೆಲಂಗಾಣದ 9, ಆಂಧ್ರ ಪ್ರದೇಶದ 8, ಹರಿಯಾಣ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ತಲಾ 3 ಮಂದಿ, ಗೋವಾ ಮತ್ತು ಅಸ್ಸಾಂನ ತಲಾ ಒಬ್ಬರು  ತಾಯ್ನಾಡಿಗೆ ಮರಳಿದ್ದಾರೆ.

ಇನ್ನು ಕೇರಳ ತನ್ನ ನಾಡಿನ ವಿದೇಶಿ ಸಂತ್ರಸ್ತರನ್ನು ಆಯಾ ಜಿಲ್ಲೆಗಳಿಗೆ ತಲುಪಿಸಲು, ಸರ್ಕಾರಿ ಬಸ್ಸುಗಳ ವ್ಯವಸ್ಥೆ ಮಾಡಿಕೊಂಡಿದೆ. ಅಲ್ಲದೆ, ಪ್ರತಿ ಅನಿವಾಸಿ ಭಾರತೀಯನಿಗೂ ಪೊಲೀಸ್‌ ಸುಪರ್ದಿಯಲ್ಲಿ ಕ್ವಾರಂಟೈನ್‌ಗೆ ಅವಕಾಶ ಕಲ್ಪಿಸಿದೆ. ಇದರ ಬೆನ್ನಲ್ಲೇ ಮಾಲ್ಡೀವ್ಸ್‌ನಿಂದ  ಹೊರಟಿರುವ ಐಎನ್‌ಎಸ್‌ ಮಗರ್‌ ಕೂಡ, ಕೊಚ್ಚಿಯನ್ನು ತಲುಪಲಿದೆ. ಅತ್ತ ವಂದೇ ಭಾರತ್ ಯೋಜನೆಯಡಿಯಲ್ಲಿ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ವಿದೇಶಗಳಲ್ಲಿರುವ ಭಾರತೀಯರನ್ನು ಕರೆತರುತ್ತಿದ್ದು, ಇತ್ತ 'ಸಮುದ್ರ ಸೇತು' ಯೋಜನೆ ಮೂಲಕ ನೌಕಾಪಡೆ  ಕೂಡ ತನ್ನ ಶಕ್ತಿ ಪ್ರದರ್ಶಿಸುತ್ತಿದೆ. ಅದರಂತೆ ಮುಂಬೈ ಕರಾವಳಿಯಲ್ಲಿ ಲಂಗರು ಹಾಕಿದ್ದ ಐಎನ್ಎಸ್ ಜಲಾಶ್ವ, ಐಎನ್ಎಸ್ ಮಗರ್ ನೌಕೆಗಳನ್ನು ಮಾಲ್ಡೀವ್ಸ್ ಗೆ ಕಳುಸಿಸಲಾಗಿತ್ತು. ಐಎನ್ಎಸ್ ಶಾರ್ದೂಲ್ ನೌಕೆಯನ್ನುಯುಎಇಗೆ ಕಳುಹಿಸಲಾಗಿದೆ.

SCROLL FOR NEXT