ದೇಶ

ರಿಯಾಜ್ ನೈಕೂ ಹತ್ಯೆ ಬೆನ್ನಲ್ಲೇ ಹಿಜ್ಬುಲ್ ಉಗ್ರ ಸಂಘಟನೆ ಕಾಶ್ಮೀರ ಘಟಕಕ್ಕೆ ಗಾಝಿ ಹೈದರ್ ನೇತೃತ್ವ

Srinivasamurthy VN

ಶ್ರೀನಗರ: ಹಿಜ್ಬುಲ್ ಉಗ್ರ ಸಂಘಟನೆಯ ಕಮಾಂಡರ್ ರಿಯಾಜ್ ನೈಕೂ ಹತ್ಯೆ ಬೆನ್ನಲ್ಲೇ ಸಂಘಟನೆಯ ಕಾಶ್ಮೀರ ಘಟಕಕ್ಕೆ ನೂತನ ಕಮಾಂಡರ್ ನನ್ನು ಆಯ್ಕೆ ಮಾಡಲಾಗಿದ್ದು, ಉಗ್ರ ಗಾಝಿ ಹೈದರ್ ಗೆ ನೇತೃತ್ವ ನೀಡಲಾಗಿದೆ.

ಕಳೆದ ಬುಧವಾರ ನಡೆದಿದ್ದ ಸೇನಾ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಉಗ್ರ ಸಂಘಟನೆಯ ಕಮಾಂಡರ್ ರಿಯಾಜ್ ನೈಕೂ ನನ್ನು ಸೇನಾ ಪಡೆಗಳು ಹತ್ಯೆ ಮಾಡಿದ್ದವು. ಇದರ ಬೆನ್ನಲ್ಲೇ ಉಗ್ರ ಸಂಘಟನೆ ತನ್ನ ಮತ್ತೋರ್ವ ಕಮಾಂಡರ್ ಆಗಿ ಉಗ್ರ ಗಾಝಿ ಹೈದರ್ ನನ್ನು ಆಯ್ಕೆ ಮಾಡಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಹಿಜ್ಬುಲ್ ಉಗ್ರ ಸಂಘಟನೆ, ಗಾಝಿ ಹೈದರ್ ನನ್ನು ಕಾಶ್ಮೀರ ವಿಭಾಗದ ಕಮಾಂಡರ್ ಆಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದೆ. ಇನ್ನು ಗಾಝಿ ಹೈದರ್ ನನ್ನು ಪಿಒಕೆಯಲ್ಲಿರುವ ಹಿಜ್ಬುಲ್ ಉಗ್ರ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾಹ್ ಉದ್  ದೀನ್ ಆಯ್ಕೆ ಮಾಡಿದ್ದಾನೆ ಎನ್ನಲಾಗಿದೆ.

ಅಂತೆಯೇ ಮತ್ತೋರ್ವ ಉಗ್ರ ಝಫರ್ ಉಲ್ ಇಸ್ಲಾಂ ನನ್ನು ಉಪ ಮುಖ್ಯಸ್ಥನಾಗಿ ಆಯ್ಕೆ ಮಾಡಿದ್ದು, ಅಬು ತಾರಿಖ್ ನನ್ನು ಉಗ್ರ ಸಂಘಟನೆಯ ಸಲಹೆಗಾರನಾಗಿ ಆಯ್ಕೆ ಮಾಡಲಾಗಿದೆ. 

ಇನ್ನು ಕಳೆದ ವಾರ ಸೇನಾಪಡೆಗಳಿಂದ ಹತನಾಗಿದ್ದ 35 ವರ್ಷದ ನೈಕೂ ಗಣಿತ ಶಿಕ್ಷಕನಾಗಿದ್ದ. 2012ರಲ್ಲಿ ಈತ ಉಗ್ರ ಸಂಘಟನೆ ಸೇರಿದ ಬಳಿಕ ಉದ್ಯೋಗ ತೊರೆದು ಸಂಪೂರ್ಣವಾಗಿ ಉಗ್ರಗಾಮಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ. 2017ರಲ್ಲಿ ಯಾಸಿನ್ ಯತೂ ಅಲಿಯಾಸ್  ಮಹಮಮದ್ ಬಿನ್ ಖಾಸಿನ್ ಘಜ್ನವಿಯನ್ನು ಸೇನಾಪಡೆಗಳು ಹೊಡೆದುರುಸಿದಾಗ ಈತ ಉಗ್ರ ಸಂಘಟನೆಯ ನೇತೃತ್ವ ವಹಿಸಿದ್ದ. 

SCROLL FOR NEXT