ದೇಶ

ದೇಶದಲ್ಲಿ ಒಂದೇ ದಿನ 4,213 ಮಂದಿಯಲ್ಲಿ ಕೊರೋನಾ ಪತ್ತೆ, ಸೋಂಕಿತರ ಸಂಖ್ಯೆ 67,152ಕ್ಕೆ ಏರಿಕೆ, 2,206 ಮಂದಿ ಸಾವು

Manjula VN

ನವದೆಹಲಿ: ಭಾರತದಲ್ಲಿ ಕೊರೋನಾ ರಣಕೇಕೆ ಹಾಕುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದಾಖಲೆಯ 4,213 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 67,152ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ. 

ಈ ನಡುವೆ ಮಹಾಮಾರಿ ವೈರಸ್'ಗೆ 2,206 ಮಂದಿ ಬಲಿಯಾಗಿದ್ದು, 20,917 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆಂದು ತಿಳಿದುಬಂದಿದೆ. 

67152 ಪೈಕಿ 20,917 ಮಂದಿ ಗುಣಮುಖರಾಗಿರುವ ಹಿನ್ನೆಲೆಯಲ್ಲಿ ಪ್ರಸ್ತುತ ದೇಶದಲ್ಲಿ 44029 ಮಂದಿ ಇನ್ನೂ ಸೋಂಕಿನಿಂದ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಕೊರೋನಾ ಹಾಟ್'ಸ್ಪಾಟ್ ಎಂಬ ಕುಖ್ಯಾತಿಗೆ ತುತ್ತಾಗಿರುವ ಮಹಾರಾಷ್ಟ್ರ ರಾಜ್ಯದಲ್ಲಿ ಭಾನುವಾರ 1278 ಸೋಂಕು ಪ್ರಕರಣಗಳು ದೃಢವಾಗಿದ್ದು, 53 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 875 ಸೋಂಕಿತರು ಮತ್ತು 19 ಜನರ ಸಾವು ಮುಂಬೈ ಒಂದರಲ್ಲೇ ದಾಖಲಾಗಿದೆ. ಉಳಿದಂತೆ ತಮಿಳುನಾಡಿನಲ್ಲಿ 669, ಗುಜರಾತ್ ನಲ್ಲಿ 398, ದೆಹಲಿಯಲ್ಲಿ 381, ಮಧ್ಯಪ್ರದೇಶದಲ್ಲಿ 157, ಪಶ್ಚಿಮ ಬಂಗಾಳದಲ್ಲಿ 153, ರಾಜಸ್ಥಾನದಲ್ಲಿ 106 ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ. 

SCROLL FOR NEXT