ದೇಶ

ಮಹಾ ಸಿಎಂ ಉದ್ಧವ್ ಠಾಕ್ರೆ ಸೇರಿ 9 ಮಂದಿ ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧ ಆಯ್ಕೆ

Lingaraj Badiger

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಆಡಳಿತರೂಢ ಮತ್ತು ಪ್ರತಿಪಕ್ಷಗಳ ಇತರೆ ಎಂಟು ಅಭ್ಯರ್ಥಿಗಳು ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಳೆದ ಏಪ್ರಿಲ್ 24ರಂದು ತೆರವಾಗಿದ್ದ ಒಂಬತ್ತು ಸ್ಥಾನಗಳಿಗೆ ಮೇ 21ರಂದು ಚುನಾವಣೆ ನಿಗದಿಯಾಗಿತ್ತು. ಈ 9 ಸ್ಥಾನಗಳಿಗೆ 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಆದರೆ ತಾಂತ್ರಿಕ ನೆಲೆಯಲ್ಲಿ ಐದು ನಾಮಪತ್ರಗಳನ್ನು ತಿರಸ್ಕರಿಸಲಾಗಿತ್ತು. ಹೀಗಾಗಿ 9 ಸ್ಥಾನಗಳಿಗೆ ಕೇವಲ ಒಂಬತ್ತು ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದರು.

ವಿಧಾನ ಪರಿಷತ್ ಚುನಾವಣಾ ಕಣದಲ್ಲಿದ್ದ 9 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಶಿವಸೇನೆ ಉದ್ಧವ್ ಠಾಕ್ರೆ ಮತ್ತು ವಿಧಾನ ಪರಿಷತ್ತಿನ ಉಪ ಸಭಾಧ್ಯಕ್ಷೆ ನೀಲಂ ಗೋರೆ ಅವರನ್ನು ಆಯ್ಕೆ ಮಾಡಿದ್ದು, ಎನ್‌ಸಿಪಿ ಅಮೋಲ್‌ ಮಿಟ್ಕರಿ ಮತ್ತು ಶಶಿಕಾಂತ್‌ ಶಿಂಧೆ ಅವರನ್ನು ನೇಮಕ ಮಾಡಿದ್ದರೆ, ಕಾಂಗ್ರೆಸ್‌ ರಾಜೇಶ್‌ ರಾಥೋಡ್‌ ಅವರನ್ನು ಆಯ್ಕೆ ಮಾಡಿದೆ.

ಇನ್ನು ಪ್ರತಿಪಕ್ಷ ಬಿಜೆಪಿ ರಂಜಿತ್‌ ಸಿನ್ಹಾ ಮೋಹಿತೆ ಪಾಟೀಲ್, ಗೋಪಿಚಂದ್ ಪಡಲ್ಕರ್, ಅಜಿತ್ ದತ್ಕೆ ಮತ್ತು ರಮೇಶ್ ಕರದ್ ಅವರು ಮೇಲ್ಮನೆಗೆ ಆಯ್ಕೆ ಮಾಡಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಮೈತ್ರಿಯಿಂದ ಸರ್ಕಾರ ರಚನೆಯಾಗಿದ್ದು, ಶಿವಸೇನಾ ಮುಖ್ಯಸ್ಥ ಉದ್ದವ್‌ ಠಾಕ್ರೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ಸ್ವೀಕರಿಸಿದ ಆರು ತಿಂಗಳ ಒಳಗೆ ಅವರು ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರಾಗುವ ಅನಿವಾರ್ಯತೆ ಇತ್ತು.

SCROLL FOR NEXT