ದೇಶ

ಪಿಎಂ ಕೇರ್ ಫಂಡ್ ಗೆ ರಾಜ್ಯದ ಉದ್ಯಮಿಗಳು ನೀಡಿದ ಹಣ ವಾಪಸ್ ಕೊಡಿ: ಕೇಂದ್ರಕ್ಕೆ ಛತ್ತೀಸ್ ಗಢ ಸಿಎಂ ಆಗ್ರಹ

Lingaraj Badiger

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ನಿಧಿ ಸಂಗ್ರಹಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿರುವ 'ಪಿಎಂ ಕೇರ್ಸ್ ಫಂಡ್'ನ ಪಾರದರ್ಶಕತೆ ಕುರಿತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ನಮ್ಮ ರಾಜ್ಯದ ಉದ್ಯಮಿಗಳು ಪಿಎಂ ಕೇರ್ಸ್ ಫಂಡ್ ಗೆ ನೀಡಿದ ಹಣವನ್ನು ವಾಪಸ್ ನೀಡುವಂತೆ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಾಗರಿಕ ಸಹಾಯಕ್ಕಾಗಿ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ(ಪಿಎಂ ಕೇರ್ಸ್)ನಿಧಿ ನೀಡಲಾದ ದೇಣಿಗೆಯ ವಿವರವನ್ನು ತಿಳಿದುಕೊಳ್ಳುವ ಹಕ್ಕು ದೇಶದ ಜನತೆಗೆ ಇದೆ ಎಂದು ಬಘೇಲ್ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪಿಎಂ ಕ್ರೇಸ್  ಫಂಡ್ ಬಗ್ಗೆ ತಿಳಿದುಕೊಳ್ಳುವ ಹಕ್ಕು ಈ ದೇಶದ ಜನತೆಗೆ ಇದೆ. ಹೀಗಾಗಿ ಆ ಬಗ್ಗೆ ಕೇಂದ್ರ ಸರ್ಕಾರ ಜನತೆಗೆ ಮಾಹಿತಿ ನೀಡಬೇಕು ಎಂದಿದ್ದಾರೆ. 

ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ(ಸಿಎಸ್ ಆರ್) ಅಡಿ ರಾಜ್ಯದ ಉದ್ಯಮಿಗಳು ಪಿಎಂ ಕೇರ್ಸ್ ಫಂಡ್ ಗೆ ನೀಡಿದ ದೇಣಿಗೆಯನ್ನು ವಾಪಸ್ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿರುವುದಾಗಿ ಬಘೇಲ್ ತಿಳಿಸಿದ್ದಾರೆ.

ಸಿಎಸ್ ಆರ್ ಅಡಿ ರಾಜ್ಯದ ಉದ್ಯಮಿಗಳು ಪಿಎಂ ಕೇರ್ಸ್ ಗೆ ನೀಡಿದ ಹಣ ನಮ್ಮದು. ಅದು ರಾಜ್ಯದ ಜನರ ಹಣ. ಹೀಗಾಗಿ ನಮ್ಮ ಹಣವನ್ನು ನಮಗೆ ವಾಪಸ್ ಕೊಡಿ. ಅದನ್ನು ರಾಜ್ಯದ ಜನರ ಕಲ್ಯಾಣಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ಛತ್ತೀಸ್ ಗಢ ಸಿಎಂ ಹೇಳಿದ್ದಾರೆ.

SCROLL FOR NEXT