ದೇಶ

ಆಂಫಾನ್ ಚಂಡಮಾರುತ:ಶ್ರಮಿಕ್ ರೈಲನ್ನು 3 ದಿನ ಸ್ಥಗಿತಗೊಳಿಸಿ ಎಂದು ಕೇಂದ್ರವನ್ನು ಕೇಳಿಕೊಂಡ ಒಡಿಶಾ ಸರ್ಕಾರ

Sumana Upadhyaya

ಭುವನೇಶ್ವರ್: ಆಂಫಾನ್ ಚಂಡಮಾರುತ ಹಿನ್ನೆಲೆಯಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಶ್ರಮಿಕ್ ವಿಶೇಷ ರೈಲು ಸೇವೆಯನ್ನು ಸ್ಥಗಿತಗೊಳಿಸುವಂತೆ ಒಡಿಶಾ ಸರ್ಕಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಚಂಡಮಾರುತದಿಂದ ಬಲಸೊರೆ, ಬದ್ರಕ್, ಜೈಪುರ್, ಗಂಜಮ್ ಮೊದಲಾದ ಪ್ರದೇಶಗಳ ಮೇಲೆ ಪರಿಣಾಮ ಬೀರಲಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತೆ ಕ್ರಮವಾಗಿ ನಾಳೆಯಿಂದ 3 ದಿನಗಳ ಕಾಲ ಕರಾವಳಿ ಭಾಗಗಳಲ್ಲಿ ಶ್ರಮಿಕ್ ವಿಶೇಷ ರೈಲುಗಳ ಸೇವೆಗಳನ್ನು ರದ್ದುಪಡಿಸುವಂತೆ ಒಡಿಶಾ ಮುಖ್ಯ ಕಾರ್ಯದರ್ಶಿಗಳು ಕೇಂದ್ರ ಸಂಪುಟ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದಾರೆ.

ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಇಂದು ಒಡಿಶಾ ಮುಖ್ಯಂಮಂತ್ರಿ ನವೀನ್ ಪಟ್ನಾಯಕ್ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಜೊತೆ ಪರಿಶೀಲನಾ ಸಭೆ ನಡೆಸಿದರು. ಎನ್ ಡಿಆರ್ ಎಫ್, ಅಗ್ನಿಶಾಮಕ ಸಿಬ್ಬಂದಿ, ಕುಡಿಯುವ ನೀರು ಪೂರೈಕೆ, ಮಾನವ ಸಂಪನ್ಮೂಲ ಮತ್ತು ಸಾಧನಗಳನ್ನು ರಸ್ತೆಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಈ ಸಂದರ್ಭದಲ್ಲಿ ಹೇಳಿದರು.

ಮುಂದಿನ 12 ಗಂಟೆಗಳಲ್ಲಿ ಆಂಫಾನ್ ಚಂಡಮಾರುತ ತೀವ್ರವಾಗಲಿದ್ದು ನಾಳೆ ಬೆಳಗ್ಗೆ ಹೊತ್ತಿಗೆ ಬಿರುಗಾಳಿ ಸಹಿತ ಭಾರೀ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ನಂತರ ಒಡಿಶಾ ಸರ್ಕಾರ ತೀವ್ರ ಮುಂಜಾಗ್ರತೆ ವಹಿಸಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ಬಲಸೊರೆ, ಭದ್ರಕ್, ಕೆಂದ್ರಪರ, ಪುರಿ, ಜಗತ್ಸಿಂಗ್ ಪುರ್, ಜೈಪುರ್ ಮತ್ತು ಮಯೂರ್ ಬಂಜ್ ಜಿಲ್ಲೆಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡವನ್ನು ನಿಯೋಜಿಸಿದೆ.

SCROLL FOR NEXT