ದೇಶ

ಕೊರೋನಾ ವೈರಸ್ ಎಫೆಕ್ಟ್: ಗಲ್ಫ್ ರಾಷ್ಟ್ರಗಳ ಜೈಲುಗಳಲ್ಲಿದ್ದ ಭಾರತೀಯ ಕೈದಿಗಳಿಗೆ ಬಿಡುಗಡೆ ಭಾಗ್ಯ!

Manjula VN

ಕೊಚ್ಚಿ: ಗಲ್ಫ್ ರಾಷ್ಟ್ರಗಳಲ್ಲಿ ಶಿಕ್ಷೆಗೊಳಗಾಗಿ ಜೈಲುವಾಸ ಅನುಭವಿಸುತ್ತಿದ್ದ ನೂರಾರು ಭಾರತೀಯರಿಗೆ ಕೊರೋನಾ ವೈರಸ್ ವರವಾಗಿ ಪರಿಣಮಿಸಿದೆ. 

ಜನದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಗಲ್ಫ್ ರಾಷ್ಟ್ರಗಳು ಜೈಲುಗಳಲ್ಲಿರುವ ವಿದೇಶಿ ಪ್ರಜೆಗಳನ್ನು ಬಿಡುಗಡೆ ಮಾಡಿ, ಅವರವರ ರಾಷ್ಟ್ರಗಳಿಗೆ ಗಡಿಪಾರು ಮಾಡುತ್ತಿದೆ. 

ಬಹ್ರೇನ್ ನಿಂದ ಕೊಚ್ಚಿಗೆ ಭಾರತೀಯರಿದ್ದ ಗುಂಪೊಂದು ಭಾನುವಾರ ಬಂದಿಳಿದಿದ್ದು, ಇದೀಗ ಭಾರತೀಯರನ್ನು ಶಾಲೆಯೊಂದರಲ್ಲಿ ಅವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಪಶ್ಚಿಮ ಏಷ್ಯಾದ ದೇಶಗಳ ಜೈಲಿನಲ್ಲಿ ಸೆರೆವಾಸದಲ್ಲಿದ್ದ ಭಾರತೀಯರನ್ನು ಕಳೆದ ವಾರ ಕೂಡ ಇಂದೋರ್ ಹಾಗೂ ಚೆನ್ನೈಗೆ ಕರೆತರಲಾಗಿತ್ತು. ಒಮನ್ ನಿಂದ ಗಡಿಪಾರಾಗಿರುವ ಮತ್ತೊಂದು ಬ್ಯಾಚನ್ನು ಮುಂದಿನ ವಾರ ಕರೆತರಲಾಗುತ್ತಿದೆ. 

ಇನ್ನು ಈ ವಾರ ಕೂಡ ಅಮೆರಿಕಾದಿಂದ 161 ಮಂದಿ ಭಾರತೀಯರನ್ನು ಗಡಿಪಾರು ಮಾಡಲಾಗುತ್ತಿದೆ. ಇವರೆಲ್ಲರನ್ನೂ ಪಂಜಾಬ್ ರಾಜ್ಯದ ಅಮೃತಸರಕ್ಕೆ ಕರೆತರಲಾಗುತ್ತಿದೆ. ಬಹ್ರೇನ್ ಹಾಗೂ ಒಮನ್ ನಿಂದ ಬರುತ್ತಿರುವ ಭಾರತೀಯರನ್ನು ಕೊಚ್ಚಿಯಲ್ಲಿ ಕ್ವಾರಂಟೈನ್ ನಲ್ಲಿರಿಸಲು ಎಲ್ಲಾ ರೀತಿಯ ಸಿದ್ಧತೆಗಲನ್ನು ನಡೆಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ ಮುರಳೀಧರನ್ ಅವರು ಹೇಳಿದ್ದಾರೆ. 

ವಿಮಾನ ಹತ್ತುವುದಕ್ಕೂ ಮುನ್ನವೇ ಎಲ್ಲಾ ಭಾರತೀಯನ್ನು ರ್ಯಾಪಿಡ್ ಟೆಸ್ಟ್'ಗಳಿಗೆ ಒಳಪಡಿಸಲಾಗುತ್ತಿದೆ. ವಿಮಾನ ಹತ್ತುವುದಕ್ಕೂ ಮುನ್ನ ಪ್ರಯಾಣಿಕರು ಪ್ರಮಾಣಪತ್ರಗಳನ್ನು ಸಲ್ಲಿಸಬೇಕು. ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಸಿಲುಕಿರುವ ತನ್ನ ರಾಜ್ಯದ ಜನತೆಯನ್ನು ಕೂಡಲೇ ತವರಿಗೆ ತರಬೇಕೆಂದು ಈ ಹಿಂದೆ ಕೇರಳ ಆಗ್ರಹಿಸಿತ್ತು. ಈ ಹಿನ್ನೆಲೆಯಲ್ಲಿ ನಾವು ಕಾಳಜಿವಹಿಸಿ ಇಟಲಿಯಲ್ಲಿರುವ ಭಾರತೀಯರ ಕರೆತರಲು ವೈದ್ಯಕೀಯ ತಂಡವನ್ನು ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಲು ನಿರ್ಧರಿಸಿದ್ದೆವು. ಆದರೆ, ಇದಕ್ಕೆ ಕೇರಳ ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದರು. 

ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಕೇರಳ ಸರ್ಕಾರ ವಿರೋಧಿಸಿದ್ದು, ಅಲ್ಲಿ ವಿದೇಶದಿಂದ ಬರುವ ಪ್ರಜೆಗಳ ಕ್ವಾರಂಟೈನ್ ಅವಧಿಯನ್ನು 14 ದಿನಗಳ ಬದಲಾಗಿ 7 ದಿನಕ್ಕೆ ಇಳಿಸಿದೆ ಎಂದು ತಿಳಿಸಿದ್ದಾರೆ. 

ರಾಜ್ಯ ಸರ್ಕಾರದ ಈ ನಿರ್ಧಾರ ಮತ್ತಷ್ಟು ಅಪಾಯವನ್ನು ಎದುರು ಮಾಡಬಹುದು. ತಜ್ಞರೇ ಲಕ್ಷಣಗಳು ಕಾಣಿಸಿಕೊಳ್ಳಲು 10ರಿಂದ 14 ದಿನಗಳು ಬೇಕು ಎನ್ನುತ್ತಿರುವಾಗ, ಕೊರೋನಾ ಇರುವ ವ್ಯಕ್ತಿಯಲ್ಲಿ 7 ದಿನಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದು ಕೇರಳ ಸರ್ಕಾರ ಯಾವ ರೀತಿ ಮಾಹಿತಿ ತಿಳಿದುಕೊಂಡಿತು ಎಂಬುದು ನನಗೆ ತಿಳಿಯುತ್ತಿಲ್ಲ ಎಂದು ಕೇರಳ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. 

SCROLL FOR NEXT