ದೇಶ

ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಅಂಫಾನ್ ಸೈಕ್ಲೋನ್ ರೌದ್ರನರ್ತನ: 10 ಮಂದಿ ಸಾವು, 6.5 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ

Manjula VN

ನವದೆಹಲಿ: ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತ ತನ್ನ ರೌದ್ರನರ್ತನವನ್ನು ಆರಂಭಿಸಿದ್ದು, ಸುಮಾರು 190 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಪ್ರಬಲವಾದ ಬಿರುಗಾಳಿಯಿಂದಾಗಿ ಎರಡು ರಾಜ್ಯಗಳು ತತ್ತರಿಸಿ ಹೋಗಿವೆ. 

ಪಶ್ಚಿಮ ಬಂಗಾಳದಲ್ಲಿ 13 ಬಾಲಕಿ ಸೇರಿದಂತೆ 10-12 ಮಂದಿ ಬಲಿಯಾಗಿದ್ದು, ಒಡಿಶಾದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಚಂಡಮಾರುತದ ಅಬ್ಬರಕ್ಕೆ ಅಪಾರ ಪ್ರಮಾಣದ ಆಸ್ತಿಪಾಸ್ತಿಗಳು ನಾಶಗೊಂಡಿವೆ. ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಅನೇಕ ಕಟ್ಟಡಗಳು ನೆಲಕಚ್ಚಿವೆ. 

ಈ ನಡುವೆ ಪಶ್ಚಿಮ ಬಂಗಾಳದಲ್ಲಿ 6.5 ಲಕ್ಷಕ್ಕೂ ಹೆಚ್ಚು ಜನರು ಹಾಗೂ ಒಡಿಶಾದಲ್ಲಿ 1.58 ಲಕ್ಷ ಜನ ಸೇರಿದಂತೆ ಒಟ್ಟು 8ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 

ಮಧ್ಯಾಹ್ನ 2.30ಕ್ಕೆ ಚಂಡಮಾರುತವು ಪಶ್ಚಿಮ ಬಂಗಾಳದ ದಿಘಾ ಹಾಗೂ ಬಾಂಗ್ಲಾದೇಶದ ಹಟಿಯಾ ದ್ವೀಪದ ನಡುವೆ ಬಂದು ಅಪ್ಪಳಿಸಿತು. ಮೊದಲು 170 ಕಿಮೀ ವೇಗದಲ್ಲಿದ್ದ ಚಂಡಮಾರುತ 190 ಕಿಮೀ ವೇಗ ಪಡೆದುಕೊಂಡಿತು. ಇದರಿಂದ ಬಂಗಾಳದ ಹಲವೆಡೆ ಕರಾವಳಿ ಪ್ರದೇಶಗಳು ತತ್ತರಗೊಂಡಿದ್ದು, ಜನವಸತಿ ಪ್ರದೇಶಗಳು ಮುಳುಗಿ ಹೋಗಿವೆ. ಮರ ಹಾಗೂ ವಿದ್ಯುತ್ ಕಂಬಗಳು ಧಾರಾಶಾಯಿ ಆಗಿವೆ. ಹೌರಾ ಜಿಲ್ಲೆ ಹಾಗೂ ಉತ್ತರ 24 ಪರಗಣ ಜಿಲ್ಲೆಯಲ್ಲಿ ಮರ ಬಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. 

ರಕ್ಷಣಾ ಕಾರ್ಯಗಳಿಗೆಂದು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯು (ಎನ್ಡಿಆರ್ಎಫ್), 20 ತಂಡಗಳನ್ನು ಒಳಿಶಾಗೆ ಹಾಗೂ 19 ತಂಡಗಳನ್ನು ಪಶ್ಚಿಮ ಬಂಗಾಳಕ್ಕೆ ರವಾನಿಸಲಾಗಿದೆ. ಈ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿವೆ. ಇನ್ನೂ 1-2 ದಿನ ಬೀಸಿ ಚಂಡಮಾರುತ ದುರ್ಬಲಗೊಳ್ಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. 

SCROLL FOR NEXT