ದೇಶ

ಭೀಕರ ಅಪಘಾತದಲ್ಲಿ ಬಿಹಾರ ಮೂಲದ 3 ವಲಸೆ ಕಾರ್ಮಿಕರ ಸಾವು, ಓರ್ವ ಗಂಭೀರ

Srinivasamurthy VN

ಮಿರ್ಜಾಪುರ: ದೇಶದಲ್ಲಿ ವಲಸೆ ಕಾರ್ಮಿಕರ ಸಾವಿನ ಸರಣಿ ಮುಂದುವರೆದಿದ್ದು, ಇಂದು ಉತ್ತರ ಪ್ರದೇಶದಲ್ಲಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಬಿಹಾರ ಮೂಲದ ಮೂವರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಬಸಾಹಿ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದ್ದು, ತಮ್ಮ ಬಿಹಾರದ ತವರು ಜಿಲ್ಲೆಯತ್ತ ತೆರಳುತ್ತಿದ್ದ ವಲಸೆ ಕಾರ್ಮಿಕರ ವಾಹನಕ್ಕೆ ಟ್ರಕ್ ಢಿಕ್ಕಿ ಹೊಡೆದಿದೆ, ಪರಿಣಾಮ ಸ್ಥಳದಲ್ಲೇ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ,. ಓರ್ವ ಕಾರ್ಮಿಕ  ಗಂಭೀರ ಸ್ಥಿತಿಯಲ್ಲಿದ್ದು ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಲಾಲ್ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಾಹನ ಪಾರ್ಕ್ ಮಾಡಿ ಅಲ್ಲಿಯೇ ಮಲಗಿದ್ದ ಕಾರ್ಮಿಕರು
ಇನ್ನು ಮೂಲಗಳ ಪ್ರಕಾರ 7 ವಲಸೆ ಕಾರ್ಮಿಕರ ತಂಡ ವಾಹನದಲ್ಲಿ ಮುಂಬೈನಿಂದ ಬಿಹಾರದ ಗೋಪಾಲ್ ಗಂಜ್ ಗೆ ತೆರಳುತ್ತಿದ್ದರು. ಈ ವೇಳೆ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಬಸಾಹಿ ಗ್ರಾಮದ ಬಳಿ ತಡರಾತ್ರಿ ವಾಹನವನ್ನು ನಿಲ್ಲಿಸಿ ಅಲ್ಲಿಯೇ ನಿದ್ರಿಸಿದ್ದಾರೆ. ಈ ವೇಳೆ  ವೇಗವಾಗಿ ಬಂದ ಟ್ರಕ್ ನಿಂತಿದ್ದ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಮೃತರನ್ನು ರಾಜು ಸಿಂಗ್ (26), ಸೌರವ್ ಕುಮಾರ್ (23) ಮತ್ತು ಅಮಿತ್ ಸಿಂಗ್ (26) ಎಂದು ಗುರುತಿಸಲಾಗಿದೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾ ನಾಥ್ ಸಂತ್ರಸ್ಥರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಅಂತೆಯೇ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ. ಅಂತೆಯೇ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಕೊಡಿಸಲಾಗುತ್ತದೆ  ಎಂದು ಹೇಳಿದ್ದಾರೆ. ಇನ್ನು ಅಪಘಾತ ಸಂಬಂಧ ಟ್ರಕ್ ಚಾಲಕನನ್ನು ಬಂಧಿಸಿ ಎಫ್ ಐಆರ್ ಹಾಕಲಾಗಿದೆ.

SCROLL FOR NEXT