ದೇಶ

ಕೊರೋನಾಘಾತ: ರಾಷ್ಟ್ರದಲ್ಲಿ ಇಂದು ಒಂದೇ ದಿನ 6,977 ಹೊಸ ಪ್ರಕರಣ ಪತ್ತೆ, ಜಗತ್ತಿನ ಟಾಪ್ 10 ಲಿಸ್ಟ್ ಗೆ ಭಾರತ ಎಂಟ್ರಿ

Nagaraja AB

ನವದೆಹಲಿ: ಸತತ ನಾಲ್ಕನೇ ದಿನವಾದ ಇಂದು ಕೂಡಾ  ದೇಶದಲ್ಲಿ  ಹೆಚ್ಚಿನ  6, 977 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1 ಲಕ್ಷದ 38 ಸಾವಿರದ 845ಕ್ಕೆ ಏರಿಕೆ ಆಗಿದೆ. 154 ಮಂದಿ ಸಾವಿನೊಂದಿಗೆ ಒಟ್ಟು ಸಾವಿನ ಸಂಖ್ಯೆ 4 ಸಾವಿರದ 21 ಆಗಿದೆ. ಈ ಮೂಲಕ ವೈರಸ್ ಪೀಡಿತರ ಸಂಖ್ಯೆಯಲ್ಲಿ ಜಗತ್ತಿನ ಟಾಪ್ 10 ಲಿಸ್ಟ್ ಗೆ ಭಾರತ ಎಂಟ್ರಿ ಆಗಿದೆ. 

ಸಕ್ರಿಯ ಸೋಂಕಿತ ಪ್ರಕರಣಗಳು 77 ಸಾವಿರಕ್ಕೆ ಏರಿಕೆ ಆಗಿದೆ. ಮುಂಬೈಯಲ್ಲಿ ತೀವ್ರ ರೀತಿಯ ಅನಾರೋಗ್ಯಕ್ಕೊಳಗಾದವರಿಗೆ ಅನೇಕ ಆಸ್ಪತ್ರೆಗಳಲ್ಲಿ ಐಸಿಯು, ತುರ್ತು ನಿಗಾ ಘಟಕಗಳೇ ಇಲ್ಲ ಎಂಬ ವರದಿಗಳ ಹೊರತಾಗಿಯೂ, ಸ್ವಲ್ಪ ಪ್ರಮಾಣದ ರೋಗಿಗಳು ಮಾತ್ರ ಐಸಿಯು, ಅಕ್ಸಿಜನ್ ಅಥವಾ ವೆಂಟಿಲೇಟರ್ ನೆರವಿನಲ್ಲಿದ್ದಾರೆ ಎಂದು ಕೇಂದ್ರಸರ್ಕಾರ ಹೇಳುತ್ತಿದೆ. 

ಈ ಮಧ್ಯೆ ದೇಶದಲ್ಲಿ 432 ಸಾರ್ವಜನಿಕ, 178 ಖಾಸಗಿ ಲ್ಯಾಬ್ ಸೇರಿದಂತೆ ಒಟ್ಟು 610 ಲ್ಯಾಬ್ ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ 1.1 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ. 

ಪ್ರತಿದಿನ ಸುಮಾರು 1.4 ಲಕ್ಷ ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯವಿದ್ದು, ಅದನ್ನು 2 ಲಕ್ಷ ಮಾದರಿಗಳಿಗೆ ಏರಿಕೆ ಮಾಡಲಾಗುವುದು, ಬಹುತೇಕ ರಾಜ್ಯಗಳು ರಾಷ್ಟ್ರೀಯ ಕ್ಷಯ ರೋಗ ಮುಕ್ತ ಕಾರ್ಯಕ್ರಮದಡಿ ಕೋವಿಡ್-19 ಮಾದರಿಗಳ ಪರೀಕ್ಷೆಗೆ  ಟ್ರೂನಾಟ್ ಯಂತ್ರಗಳನ್ನು ನಿಯೋಜಿಸಿರುವುದಾಗಿ ಸಮಿತಿ ಹೇಳಿದೆ.

ಈ ಯಂತ್ರಗಳ ಹೊರತಾಗಿಯೂ ಖಾಸಗಿ ಮತ್ತು ಸಾರ್ವಜನಿಕ ಲ್ಯಾಬ್ ಗಳು ಇಲ್ಲದ ಜಿಲ್ಲೆಗಳಲ್ಲಿ ಆಧುನಿಕ ವೈರಾಣು ಪ್ರಯೋಗಾಲಯಗಳ ಮೂಲಕ ಪರೀಕ್ಷೆ ಮಾಡಲಾಗುತ್ತಿದೆ. ಈ ಕಾರಣದಿಂದಾಗಿ ಯಾವುದೇ ರಾಜ್ಯದಲ್ಲೂ ಪರೀಕ್ಷಾ ಮೂಲಸೌಕರ್ಯದ ಸಮಸ್ಯೆಯಾಗಿಲ್ಲ ಎಂದು ಐಸಿಎಂಆರ್ ಹೇಳಿಕೆಯಲ್ಲಿ ತಿಳಿಸಿದೆ. 

SCROLL FOR NEXT