ದೇಶ

ಕ್ವಾರಂಟೈನ್ ನಿಂದಾಗಿ ಮಾನಸಿಕ ಒತ್ತಡ ಹಾಗೂ ಖಿನ್ನತೆ ಸಮಸ್ಯೆ ಹೆಚ್ಚುತ್ತಿದೆ: ಅಧ್ಯಯನ ವರದಿ

Raghavendra Adiga

ನವದೆಹಲಿ: ಕೊರೋನಾ ಕಡ್ಡಾಯ ಕ್ವಾರಂಟೈನ್ ಮಾನವನ ಮಾನಸಿಕ ಸ್ವಾಸ್ಥ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ವೈದ್ಯಕೀಯ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಯನವು  ಈ ಮಾಹಿತಿಯನ್ನು ಬಹಿರಂಗಪಡಿಸಿದೆ.

ನವದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಮನೋವೈದ್ಯಕೀಯ ಸಾಮಾಜಿಕ ಕಾರ್ಯ ವಿಭಾಗದ ಉಪನ್ಯಾಸಕ ಉಪೇಂದ್ರ ಸಿಂಗ್ ನೇತೃತ್ವದ ಸಂಶೋಧನಾ ತಂಡ ನಡೆಸಿದ ಅಧ್ಯಯನವು ಕೊರೋನಾವೈರಸ್ ಹೊಂದಿರುವ ರೋಗಲಕ್ಷಣವಿಲ್ಲದ ವ್ಯಕ್ತಿಗಳ ಮೇಲೆ ಕ್ವಾರಂಟೈನ್ ಅವಧಿಯ ಮಾನಸಿಕ ಪರಿಣಾಮವು ಸಾಕಷ್ಟು ಹೆಚ್ಚಾಗಿದೆ ಎಂದು ಪತ್ತೆ ಮಾಡಿದೆ.

ಒಟ್ಟು 380 ವ್ಯಕ್ತಿಗಳು ಅಧ್ಯಯನದಲ್ಲಿ ಭಾಗವಹಿಸಿದ್ದರು. ಕ್ವಾರಂಟೈನ್ ನಲ್ಲಿದ್ದವರ ರಾಸರಿ ವಯಸ್ಸು 33.5 ವರ್ಷಗಳು ಮತ್ತು ಅವರಲ್ಲಿ ಶೇಕಡಾ 72 ರಷ್ಟು ಪುರುಷರು ಎನ್ನುವುದು ಗಮನಾರ್ಹ. ಇನ್ನು ಇವರೆಲ್ಲರೂ ಸುಶಿಕ್ಷಿತರಾಗಿದ್ದು ಶೇಕಡಾ 66 ರಷ್ಟು ಮಂದಿ ಉತ್ತಮ ಅರ್ಹತೆ ಪಡೆದಿದ್ದಾರೆ.

ಅಧ್ಯಯನದಲ್ಲಿ ಭಾಗವಹಿಸಿದ್ದ  ಶೇಕಡಾ 46 ಕ್ಕಿಂತ ಹೆಚ್ಚು ಮಂದಿ ತೀವ್ರ ಒತ್ತಡದಿಂದ ಬಳಲುತ್ತಿದ್ದಾರೆ ಶೇ. 14ರಷ್ಟು ಮಂದಿ ಆತಂಕ ಮತ್ತು ಶೇ. 8ರಷ್ಟು ಮಂದಿ ಖಿನ್ನತೆಯಿಂದ ಪೀಡಿತರಾಗಿದ್ದಾರೆ.

ಕ್ವಾರಂಟೈನ್ ಅವಧಿಯಲ್ಲಿ ಸರಿಯಾದ ಮಾನಸಿಕ ಆರೋಗ್ಯ ಸೌಲಭ್ಯಗಳ ಕೊರತೆಯಿಂದಾಗಿ ಈ ಪರಿಸ್ಥಿತಿ ಇನ್ನಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.

SCROLL FOR NEXT