ದೇಶ

ಕೊರೋನಾ ವೈರಸ್: ಸೋಂಕು ನಿಯಂತ್ರಣಕ್ಕೆ ಕೇರಳ ತಜ್ಞರ ನೆರವು ಕೋರಿದ ಮಹಾರಾಷ್ಟ್ರ

Srinivasamurthy VN

ಮುಂಬೈ: ದೇಶದಲ್ಲೇ ಅತ್ಯಂತ ವೇಗವಾಗಿ ಕೊರೋನಾ ವೈರಸ್ ಆರ್ಭಟಕ್ಕೆ ತುತ್ತಾಗಿರುವ ಮಹಾರಾಷ್ಟ್ರ, ಇದೀಗ ಸೋಂಕು ನಿಯಂತ್ರಣ ಸಂಬಂಧ ಕೇರಳದ ತಜ್ಞರ ನೆರವು ಕೋರಿದೆ.

ಈ ಬಗ್ಗೆ ಮಹಾರಾಷ್ಟ್ರದ ಕೋವಿಡ್-19 ವಿಭಾಗದ ನಿರ್ದೇಶಕ ಮತ್ತು ನೋಡಲ್ ಅಧಿಕಾರಿ ಡಾ.ಟಿಪಿ ಲಹಾನೆ ಅವರು ಕೇರಳದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಕೆಕೆ ಶೈಲಜಾ ಅವರಿಗೆ ಪತ್ರ ಬರೆದಿದ್ದು, ವೈದ್ಯಕೀಯ ನೆರವು ನೀಡುವಂತೆ ಕೋರಿದ್ದಾರೆ.

ಪತ್ರದಲ್ಲಿ, 'ಭವಿಷ್ಯದಲ್ಲಿ ಮುಂಬೈ ಮತ್ತು ಪುಣೆಯಲ್ಲಿ ಕೊರೋನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ. ಅಲ್ಲಿ ಕೋವಿಡ್‌-19 ವಿರುದ್ಧ ಹೋರಾಡಲು 50 ತಜ್ಞ ವೈದ್ಯರು ಮತ್ತು ದಾದಿಯರನ್ನು ಕಳುಹಿಸುವಂತೆ ಕೇರಳ ಸರ್ಕಾರವನ್ನು ಕೋರಲಾಗಿದೆ ಎಂದು  ಡಾ.ಲಹಾನೆ ತಿಳಿಸಿದ್ದಾರೆ. ಅಂತೆಯೇ ಎಂಬಿಬಿಎಸ್ ವೈದ್ಯರಿಗೆ ತಿಂಗಳಿಗೆ 80,000 ರೂ  ಮತ್ತು ಎಂಡಿ / ಎಂಎಸ್ ತಜ್ಞ ವೈದ್ಯರಿಗೆ ತಿಂಗಳಿಗೆ ರೂ 2 ಲಕ್ಷ  ಪಾವತಿಸಲು ರಾಜ್ಯ ಸರ್ಕಾರ ಮುಂದಾಗಿದೆ, ತರಬೇತಿ ಪಡೆದ ಶುಶ್ರೂಷಕ ಸಿಬ್ಬಂದಿಗೆ ತಿಂಗಳಿಗೆ ರೂ 30,000  ನೀಡುವುದಾಗಿ  ಸರ್ಕಾರ ಹೇಳಿದೆ. ಈ ವೈದ್ಯಕೀಯ ಸಿಬ್ಬಂದಿಗೆ ಮಹಾರಾಷ್ಟ್ರ ಸರ್ಕಾರ ವಸತಿ, ಊಟ, ಅಗತ್ಯ ಔಷಧ. ವೈಯಕ್ತಿಕ ರಕ್ಷಣಾ ಕಿಟ್‌ಗಳನ್ನು ಕೂಡ ಸರ್ಕಾರ ಪೂರೈಸಲಿದೆ ಎಂದೂ ಹೇಳಿದ್ದಾರೆ.

ಮುಂದೆ ಎದುರಾಗಲಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಮುಂಬೈ ನಗರದ ಮಹಾಲಕ್ಷ್ಮಿ ರೇಸ್ ಕೋರ್ಸ್‌ನಲ್ಲಿ 600 ಹಾಸಿಗೆಗಳ ಕೋವಿಡ್‌ ಆರೋಗ್ಯ ಕೇಂದ್ರವನ್ನು ಸ್ಥಾಪಿಪಿಸುತ್ತಿದೆ. ಇದರಲ್ಲಿ 125 ಹಾಸಿಗೆಗಳ ಐಸಿಯು ಕೂಡ ಇರಲಿದೆ. ಇಲ್ಲಿ ಖಾಸಗಿ ಆಸ್ಪತ್ರೆಗಳ  ವೈದ್ಯರನ್ನೂ ನಿಯೋಜಿಸಲಾಗಿದೆ. ಆದರೆ, ಇನ್ನೂ ಹೆಚ್ಚಿನ ವೈದ್ಯರು ಸಿಬ್ಬಂದಿಯ ಅಗತ್ಯವಿದೆ,’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ಇನ್ನು ಕೊರೋನಾ ವೈರಸ್‌ ನಿಯಂತ್ರಣಾ ಕ್ರಮಗಳ ಕುರಿತು ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಾಜೇಶ್ ತೋಪೆ ಅವರು ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರೊಂದಿಗೆ ಸಮಾಲೋಚನೆ ನಡೆಸಿದ್ದರು. ಅದಾದ ಮರುದಿನವೇ  ಮಹಾರಾಷ್ಟ್ರ ಸರ್ಕಾರ ವೈದ್ಯರು ಮತ್ತು ದಾದಿಯರ ನೆರವು ಕೋರಿ ಕೇರಳ ಸರ್ಕಾರಕ್ಕೆ ಪತ್ರ ಬರೆದಿದೆ.  

SCROLL FOR NEXT