ದೇಶ

ಏರ್ ಇಂಡಿಯಾ ಪೈಲಟ್ ಗೆ ಕೊರೋನಾ ಪಾಸಿಟಿವ್, ದೆಹಲಿ - ಮಾಸ್ಕೋ ವಿಮಾನ ಅರ್ಧಕ್ಕೆ ವಾಪಸ್

Lingaraj Badiger

ನವದೆಹಲಿ: ದೆಹಲಿಯಿಂದ ಮಾಸ್ಕೋಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ ಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದ್ದು, ವಿಮಾನವನ್ನು ಅರ್ಧಕ್ಕೆ ವಾಪಸ್ ಕರೆಯಿಸಿಕೊಳ್ಳಲಾಗಿದೆ.

ಮಾಸ್ಕೋದಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರಲು ಹೋಗುತ್ತಿದ್ದ ಈ ವಿಮಾನ ಟೇಕಾಫ್ ಆಗುವ ಮುನ್ನ ಸಿಬ್ಬಂದಿಗಳ ಪೂರ್ವ-ಹಾರಾಟದ ಪರೀಕ್ಷಾ ವರದಿಗಳನ್ನು ಪರಿಶೀಲಿಸುವಾಗ ಈ ಪೈಲಟ್ ಪಾಸಿಟಿವ್ ವರದಿಯನ್ನು ನೆಗಟಿವ್ ಎಂದು ತಪ್ಪಾಗಿ ಓದಿಕೊಳ್ಳಲಾಗಿದೆ. ನಂತರ ಅಧಿಕಾರಿಗಳಿಗೆ ತಮ್ಮ ತಪ್ಪಿನ ಅರಿವಾಗಿದ್ದು, ವಿಮಾನವನ್ನು ಅರ್ಧಕ್ಕೆ ವಾಪಸ್ ಕರೆಯಿಸಿಕೊಂಡಿದ್ದಾರೆ.

ಇಂದು ಮಧ್ಯಾಹ್ನ 12.30ರ ಸುಮಾರಿಗೆ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್ ಆಗಿದ್ದು, ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ, ಅದು ಖಾಲಿ ವಿಮಾನವಾಗಿತ್ತು.

ದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ನಡುವೆಯೂ ದೇಶಿ ವಿಮಾನ ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ಅಂತರಾಷ್ಟ್ರೀಯ ವಿಮಾನ ಸಂಚಾರಕ್ಕೆ ಇನ್ನೂ ನಿರ್ಬಂಧ ವಿಧಿಸಲಾಗಿದೆ.

SCROLL FOR NEXT