ದೇಶ

ದೇಶದಲ್ಲಿ ಒಂದೇ ದಿನ 7,964 ಜನಕ್ಕೆ ಕೊರೋನಾ ವೈರಸ್, ಸೋಂಕಿತರ ಸಂಖ್ಯೆ 1.73 ಲಕ್ಷಕ್ಕೆ ಏರಿಕೆ

Manjula VN

ನವದೆಹಲಿ: ನಾಲ್ಕನೇ ಹಂತದ ಲಾಕ್'ಡೌನ್ ಮುಕ್ತಾಯಗೊಳ್ಳಲು ಕೇವಲ ಒಂದು ದಿನವಷ್ಟೇ ಬಾಕಿ ಇದ್ದು, ಈ ನಡುವಲ್ಲೇ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಲು ಆರಂಭಿಸಿದೆ. ಕಳೆದ 24 ಗಂಟೆಗಳಲ್ಲಿ ದಾಖಲೆಯ 7,964 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1.73 ಲಕ್ಷಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಮಾಹಿತಿ ನೀಡಿದೆ. 

ಕಳೆದ ಮೂರು ದಿನಗಳಿಂದಲೂ ಸೋಂಕಿತರ ಸಂಖ್ಯೆ 7,000 ಗಡಿ ದಾಟುತ್ತಲೇ ಇದ್ದು, ಇಂದೂ ಕೂಡ ಬರೋಬ್ಬರಿ 7,964 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು 1,73,763 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 

ಇದೇ ವೇಳೆ 265 ಮಂದಿ ಹೆಮ್ಮಾರಿ ವೈರಸ್'ಗೆ ಬಲಿಯಾಗಿದ್ದು, ದೇಶದಲ್ಲಿ ಸಾವಿನ ಸಂಖ್ಯೆ ಕೂಡ 4,971ಕ್ಕೆ ಏರಿಕೆಯಾಗಿದೆ. ಈ ನಡುವೆ 1.73 ಲಕ್ಷ ಸೋಂಕಿತರ ಪೈಕಿ 82,370 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಪ್ರಸ್ತುತ ದೇಶದಲ್ಲಿನ್ನೂ 86,422 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ಸಚಿವಾಲಯ ಮಾಹಿತಿ ನೀಡಿದೆ. 

ದೇಶದಲ್ಲಿ ಸಾವಿನ ವೇಗ ಕೂಡ ವೇಗಗತಿಯಲ್ಲಿ ಸಾಗುತ್ತಿದ್ದು, ಈ ವೇಗವನ್ನು ಗಮಿನಿಸಿದರೆ, ಇನ್ನೆರಡು ದಿನಗಳಲ್ಲಿ 5,000 ಗಡಿ ದಾಟುವ ಎಲ್ಲಾ ಸಾಧ್ಯತೆಗಳೂ ಕಂಡು ಬರುತ್ತಿವೆ. ಮಹಾರಾಷ್ಟ್ರ ರಾಜ್ಯವೊಂದರಲ್ಲಿಯೇ ನಿನ್ನೆ 116 ಮಂದಿ ಸಾವಿಗೀಡಾಗಿದ್ದಾರೆ. 

ಈ ನಡುವೆ ಮಹಾರಾಷ್ಟ್ರದಲ್ಲಿ ಹೊಸದಾಗಿ 116 ಮಂದಿ ಪೊಲೀಸ್ ಸಿಬ್ಬಂದಿಯಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದೆ. ಪ್ರತಿ ನಿತ್ಯ 100 ಮಂದಿ ಪೊಲೀಸರಲ್ಲಿ ಸೋಂಕು ದೃಢಪಡುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಇದರೊಂದಿಗೆ ಈ ವರೆಗೆ ಕೊರೋನಾಗೆ ತುತ್ತಾದ ಪೊಲೀಸರ ಸಂಖ್ಯೆ 2211ಕ್ಕೇರಿದೆ. 25 ಮಂದಿ ಪೊಲೀಸರು ಮೃತಪಟ್ಟಿದ್ದಾರೆ. 

SCROLL FOR NEXT