ದೇಶ

ದೇಶದ ಒಟ್ಟಾರೆ ಕೋವಿಡ್-19 ಸೋಂಕು ಪ್ರಕರಣಗಳಲ್ಲಿ ಅರ್ಧಪಾಲು ಲಾಕ್‌ಡೌನ್ 4.0ನದ್ದು!

Srinivasamurthy VN

ನವದೆಹಲಿ: ದೇಶದ ಒಟ್ಟಾರೆ ಕೊರೋನಾ ಸೋಂಕು ಪ್ರಕರಣಗಳ ಪೈಕಿ ಲಾಕ್ ಡೌನ್ 4.0 ಸಮಯದ ವೇಳೆ ಸುಮಾರು ಶೇ.50ರಷ್ಟು ಸೋಂಕು ಪ್ರಕರಣಗಳು ದಾಖಲಾಗಿವೆ.

ಹೌದು.. ದೇಶದಲ್ಲಿ ಈವರೆಗೂ ಕೊರೋನಾ ಸೋಂಕಿತರ ಸಂಖ್ಯೆ 1.82 ಲಕ್ಷಕ್ಕೇರಿದ್ದು, ಈ ಪೈಕಿ ಕಳೆದ 24 ಗಂಟೆಗಳಲ್ಲಿ ಗರಿಷ್ಠ 8,380 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.ಈ ಪೈಕಿ ಮೇ 18ರಿಂದ ಅಂದರೆ ಲಾಕ್ ಡೌನ್ 4.0 ಆರಂಭವಾದ ದಿನದಿಂದ ಇಂದು ಬೆಳಗ್ಗೆ 8  ಗಂಟೆಯವರೆಗೂ 85,974ಸೋಂಕು ಪ್ರಕರಣಗಳು ದಾಖಲಾಗಿವೆ. ಆ ಮೂಲಕ ದೇಶದ ಒಟ್ಟಾರೆ ಪ್ರಕರಣಗಳ ಪೈಕಿ ಶೇ.47.20 ಸೋಂಕು ಪ್ರಕರಣಗಳು ಲಾಕ್ ಡೌನ್ 4.0 ಅವಧಿಯಲ್ಲೇ ದಾಖಲಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂದು ಮಧ್ಯರಾತ್ರಿಗೆ ಲಾಕ್ ಡೌನ್ 4.0  ಅಂತ್ಯವಾಗಲಿದ್ದು, ನಾಳೆಯಿಂದ ಲಾಕ್ ಡೌನ್ 5.0 ಆರಂಭವಾಗಲಿದೆ.

ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಅನ್ವಯ ಲಾಕ್ ಡೌನ್ ಆರಂಭವಾದ ಮಾರ್ಚ್ 24ರವರೆಗೂ ದೇಶದಲ್ಲಿ ಕೇವಲ 512 ಕೊರೋನಾ ಪಾಸಿಟಿವ್ ಪ್ರಕರಣಗಳು ಮಾತ್ರ ಇದ್ದವು. ಜನವರಿ 30ರಂದು ಕೇರಳದಲ್ಲಿ ಮೊದಲ ಸೋಂಕು ಪ್ರಕರಣ ದಾಖಲಾಗಿತ್ತು. ಚೀನಾದ  ವುಹಾನ್ ವಿವಿಯಲ್ಲಿ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. 

ಬಳಿಕ 21 ದಿನಗಳ ಮೊದಲ ಲಾಕ್ ಡೌನ್ ವೇಳೆ ದೇಶದಲ್ಲಿ 10,877 ಸೋಂಕು ಪ್ರಕರಣಗಳಿದ್ದವು. ಏಪ್ರಿಲ್ 15ರಿಂದ ಮೇ 3ರವಗೆ 19 ದಿನಗಳ ವರೆಗೆ ಇದ್ದ ಲಾಕ್ ಡೌನ್ 2.0 ಅವಧಿಯಲ್ಲಿ 31,094 ಸೋಂಕು ಪ್ರಕರಣಗಳು ದಾಖಲಾಗಿದ್ದವು. ಮೇ 4 ರಿಂದ ಮೇ 17ರವರೆಗೆ 14 ದಿನಗಳ ಕಾಲ  ಇದ್ದ ಲಾಕ್ ಡೌನ್ 3.0 ವೇಳೆ  53,636 ಸೋಂಕು ಪ್ರಕರಣಗಳು ದಾಖಲಾಗಿತ್ತು. ಮೇ 18 ರಿಂದ ಇಂದು ಬೆಳಗ್ಗೆ 8 ಗಂಟೆಯವರೆಗೂ 85,974ಸೋಂಕು ಪ್ರಕರಣಗಳು ದಾಖಲಾಗಿವೆ. ಕೊರೋನಾ ವೈರಸ್ ಗೆ ವ್ಯಾಪಕವಾಗಿ ತುತ್ತಾದ ದೇಶಗಳ ಪೈಕಿ ಭಾರತ 9ನೇ ಸ್ಥಾನದಲ್ಲಿದೆ. 

ಭಾರತದಲ್ಲಿ ಸೋಂಕು ಪ್ರಮಾಣ ಹೆಚ್ಚಳಕ್ಕೆ ಲಾಕ್ ಡೌನ್ ಸಡಿಲಿಕೆ, ವಲಸೆ ಕಾರ್ಮಿಕರ ರವಾನೆ ಮತ್ತು ವಿದೇಶದಲ್ಲಿದ್ದ ಅನಿವಾಸಿ ಭಾರತೀಯರನ್ನು ದೇಶಕ್ಕೆ ವಾಪಸ್ ಕರೆತಂದದ್ದೇ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT