ದೇಶ

ಮುಂಬೈ ಪೊಲೀಸರಿಂದ ಬಂಧನ: ಜೈಲಿನ ಕೋವಿಡ್-19 ಕೇಂದ್ರದಲ್ಲಿ ರಾತ್ರಿ ಕಳೆದ ಅರ್ನಬ್ ಗೋಸ್ವಾಮಿ

Sumana Upadhyaya

ಅಲಿಬೌಗ್: 2018ರಲ್ಲಿ ಇಂಟೀರಿಯರ್ ಡಿಸೈನರ್ ಒಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರಿಂದ ಬಂಧನಕ್ಕೀಡಾಗಿ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಕಳೆದ ರಾತ್ರಿ ಕೋವಿಡ್-19 ಕೇಂದ್ರಕ್ಕೆ ಮೀಸಲಾಗಿದ್ದ ಸ್ಧಳೀಯ ಶಾಲೆಯೊಂದರಲ್ಲಿ ರಾತ್ರಿಯನ್ನು ಕಳೆದರು. ಈ ಕೋವಿಡ್-19 ಕೇಂದ್ರವನ್ನು ಸದ್ಯ ಅಲಿಬೌಗ್ ಕಾರಾಗೃಹದ ಕೈದಿಗಳ ತಂಗುವಿಕೆಗೆ ನೀಡಲಾಗಿದೆ.

ಮಹಾರಾಷ್ಟ್ರದ ರಾಯ್ ಗಢ್ ಜಿಲ್ಲೆಯಲ್ಲಿರುವ ಅಲಿಬೌಗ್ ನ ಕೋರ್ಟ್ ನಿನ್ನೆ ಅರ್ನಬ್ ಗೋಸ್ವಾಮಿ ಮತ್ತು ಇತರ ಇಬ್ಬರನ್ನು ನವೆಂಬರ್ 18ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ. ಅರ್ನಬ್ ಅವರನ್ನು 14 ದಿನಗಳ ಕಸ್ಟಡಿಗೊಪ್ಪಿಸಲು ಅನುಮತಿ ನೀಡಬೇಕೆಂದು ಪೊಲೀಸರು ಕೇಳಿದ್ದರು. ಆದರೆ ಕಸ್ಟಡಿ ತನಿಖೆ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿತು.

ಬಂಧನದ ನಂತರ ನಿನ್ನೆ ಅರ್ನಬ್ ಗೋಸ್ವಾಮಿಯವರನ್ನು ರಾತ್ರಿ ವೈದ್ಯಕೀಯ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಪರೀಕ್ಷೆ ಮಾಡಿದ ನಂತರ ಅಲಿಬೌಗ್ ನಗರ ಪರಿಷತ್ ಶಾಲೆಗೆ ಕರೆದೊಯ್ಯಲಾಯಿತು. ಅದನ್ನು ಅಲಿಬೌಗ್ ಕಾರಾಗೃಹದ ಕೋವಿಡ್-19 ಕೇಂದ್ರಕ್ಕೆ ಮೀಸಲಿಡಲಾಗಿದೆ. ಅಲ್ಲಿಯೇ ರಾತ್ರಿಯನ್ನು ಕಳೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅರ್ನಬ್ ಗೋಸ್ವಾಮಿ ಮತ್ತು ಇತರ ಇಬ್ಬರ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 ಮತ್ತು 34ರಡಿ ಕೇಸು ದಾಖಲಾಗಿದೆ. ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ನಾಯಕ್ ತಾಯಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಅರ್ನಬ್ ಗೋಸ್ವಾಮಿ ಮೇಲಿದ್ದು ತೆಗೆದುಕೊಂಡ ಸಾಲವನ್ನು ಹಿಂತಿರುಗುವ ವಿಚಾರದಲ್ಲಿ ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ಹೇಳಲಾಗಿದೆ. 

SCROLL FOR NEXT