ದೇಶ

ಇಂಡೋ-ಯುಎಸ್ ಒಪ್ಪಂದಗಳಿಗೆ ಬಲವಾದ ದ್ವಿಪಕ್ಷೀಯ ಬೆಂಬಲವಿದೆ: ಬೈಡನ್ ಗೆಲುವಿನ ಸನಿಹದಲ್ಲಿರುವಂತೆ ಭಾರತದ ಪ್ರತಿಕ್ರಿಯೆ

Nagaraja AB

ನವದೆಹಲಿ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಕ್ಕಾಗಿ ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿರುವಂತೆಯೇ ಉಭಯ ದೇಶಗಳ ನಡುವಿನ ಜಾಗತಿಕ ಕಾರ್ಯತಂತ್ರ ಪಾಲುದಾರಿಕೆಗೆ ಅಮೆರಿಕದಲ್ಲಿ ಬಲವಾದ ದ್ವಿಪಕ್ಷೀಯ ಬೆಂಬಲವಿದೆ. ಚುನಾವಣಾ ಫಲಿತಾಂಶದಿಂದ ದ್ವಿಪಕ್ಷೀಯ ಒಪ್ಪಂದಗಳ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಭಾರತ ಶುಕ್ರವಾರ ಹೇಳಿದೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ಪರಿಣಾಮ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರಿವಾಸ್ತವ, ನಾವು ಕೂಡಾ ಚುನಾವಣಾ ಫಲಿತಾಂಶವನ್ನು ಕಾಯುತ್ತಿರುವುದಾಗಿ ಹೇಳಿದ್ದಾರೆ.

ಸಮಗ್ರ ಕಾರ್ಯತಂತ್ರದ ಇಂಡೋ- ಯುಎಸ್ ಸಹಭಾಗಿತ್ವವು ಬಲವಾದ ದ್ವಿಪಕ್ಷೀಯ ಬೆಂಬಲ ಹೊಂದಿದ್ದು, ಹಿಂದಿನ ಅಧ್ಯಕ್ಷರು ಹಾಗೂ ಆಡಳಿತಾಧಿಕಾರಿಗಳು ಸಂಬಂಧವನ್ನು ಅತ್ಯುನತ್ತ ಮಟ್ಟದಲ್ಲಿ ಹೆಚ್ಚಿಸಿರುವುದಾಗಿ ಅವರು ಪ್ರತಿಪಾದಿಸಿದ್ದಾರೆ.

ಇತ್ತೀಚಿನ ವರದಿ ಪ್ರಕಾರ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್  ಮ್ಯಾಜಿಕ್ ನಂಬರ್ 270 ಎಲೆಕ್ಟೋರಲ್ ಕಾಲೇಜ್ ಮತಗಳ ಅಂಚಿನಲ್ಲಿದ್ದಾರೆ.

"ಇಂಡೋ-ಯುಎಸ್ ಸಂಬಂಧಗಳು ಬಲವಾದ ಅಡಿಪಾಯಗಳ ಮೇಲೆ ನಿಂತಿವೆ. ನಮ್ಮ ಸಂಬಂಧಗಳು ಸಾಧ್ಯವಿರುವ ಪ್ರತಿಯೊಂದು ಕ್ಷೇತ್ರದಲ್ಲೂ ಸಹಕಾರವನ್ನು ಒಳಗೊಳ್ಳುತ್ತವೆ, ಇದು ಕಾರ್ಯತಂತ್ರದಿಂದ ರಕ್ಷಣೆಗೆ, ಹೂಡಿಕೆಯಿಂದ ವ್ಯಾಪಾರದಿಂದ ಜನರಿಂದ ಜನರ ಸಂಬಂಧಗಳಿಗೆ ವಿಸ್ತರಿಸುತ್ತದೆ ಎಂದು ಅವರು ಹೇಳಿದ್ದಾರೆ. 

ಟ್ರಂಪ್ ಆಡಳಿತಾವಧಿಯ ಕಳೆದ ನಾಲ್ಕು ವರ್ಷಗಳಲ್ಲಿ, ವಿಶೇಷವಾಗಿ ರಕ್ಷಣಾ ಮತ್ತು ಭದ್ರತೆಯ ಕ್ಷೇತ್ರಗಳಲ್ಲಿ ಭಾರತ ಮತ್ತು ಯುಎಸ್ ನಡುವಿನ ಒಪ್ಪಂದಗಳಲ್ಲಿ ಏರಿಕೆಯಾಗಿದೆ.  ಇಂಡೋ-ಪೆಸಿಫಿಕ್‌ನಲ್ಲಿ ಭಾರತಕ್ಕೆ ಹೆಚ್ಚಿನ ಪಾತ್ರ ವಹಿಸಲು ಟ್ರಂಪ್ ಆಡಳಿತ ಬಲವಾಗಿ ಒಲವು ತೋರಿದೆ ಎಂದು ಅವರು ತಿಳಿಸಿದ್ದಾರೆ.
 

SCROLL FOR NEXT