ದೇಶ

ಅಮೆರಿಕದ ನೂತನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಗೆ ತಮಿಳಿನಲ್ಲಿ ಪತ್ರ ಬರೆದ ಡಿಎಂಕೆ ನಾಯಕ!

Nagaraja AB

ಚೆನ್ನೈ: ಅಮೆರಿಕದ ನೂತನ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಕ್ಕೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರಿಗೆ ಡಿಎಂಕೆ ಅಧ್ಯಕ್ಷ ಎಂ. ಕೆ. ಸ್ಟಾಲಿನ್  ತಮಿಳಿನಲ್ಲಿ ಪತ್ರ ಬರೆದಿದ್ದು, ತಮಿಳುನಾಡಿನೊಂದಿಗೆ ಆಕೆಯ ನಂಟನ್ನು ನೆನಪು ಮಾಡಿದ್ದಾರೆ. ಕಮಲ್ಯಾ ಹ್ಯಾರಿಸ್ ಅಮೆರಿಕಕ್ಕೆ ಒಳ್ಳೆಯ ಹೆಸರು ತಂದುಕೊಡಲಿದ್ದಾರೆ ಎಂದು ಸ್ಟಾಲಿನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ವಣಕ್ಕಂ'' ನೊಂದಿಗೆ  ಕಮಲಾ ಹ್ಯಾರಿಸ್ ಗೆ ಶುಭಾಶಯ ಕೋರಿರುವ ಸ್ಟಾಲಿನ್, ಆಕೆಯ ತಾಯಿ ತಮಿಳುನಾಡು ಮೂಲದವರಾಗಿದ್ದು, ಅಮೆರಿಕದ ಮೊದಲ ಮಹಿಳೆ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ರಾಜ್ಯದ ಜನರು ಹೆಮ್ಮೆ ಪಡುವಂತಹ ವಿಚಾರವಾಗಿದೆ ಎಂದಿದ್ದಾರೆ. 

ತಮಿಳು ಕಮಲಾ ಹ್ಯಾರಿಸ್ ತಾಯಿ ಶ್ಯಾಮಲಾ ಗೋಪಾಲನ್ ಹ್ಯಾರಿಸ್ ಅವರ ಮಾತೃ ಭಾಷೆಯಾಗಿರುವುದರಿಂದ ಅದು ಹೆಚ್ಚಿನ ಸಂತೋಷವನ್ನುಂಟುಮಾಡಲಿದೆ ಎಂಬ ಕಾರಣದಿಂದ ಅದೇ ಭಾಷೆಯಲ್ಲಿ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಕಮಲಾ ಹ್ಯಾರಿಸ್ ಅವರ ಗೆಲುವು ದ್ರಾವಿಡ ಚಳವಳಿಗೆ ಆತ್ಮವಿಶ್ವಾಸವನ್ನು ನೀಡಿದೆ. ಅದು ಸಮತಾವಾದಿ ಸಮಾಜ ಮತ್ತು ಲಿಂಗ ಸಮಾನತೆಯನ್ನು ನಂಬಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಪ್ರತಿಯೊಂದನ್ನು ಕಮಲಾ ಹ್ಯಾರಿಸ್  ಅವರ ಫೇಸ್‌ಬುಕ್ ಪುಟದಲ್ಲಿ ಸಹ ಪೋಸ್ಟ್ ಮಾಡಲಾಗಿದೆ.

ಕಠಿಣ ಪರಿಶ್ರಮದಿಂದ ಹ್ಯಾರಿಸ್ ಗೆಲುವು ಸಾಧಿಸಿದ್ದು, ತಮಿಳು ಮೂಲದ ಮಹಿಳೆ ಅಮೆರಿಕವನ್ನು ಆಳಲು ಸಹ ಅರ್ಹವಾಗಿದ್ದಾರೆ ಎಂಬುದನ್ನು ತೋರಿಸಿದ್ದಾರೆ. ತಮ್ಮ ಭೇಟಿಗೆ ತಮಿಳುನಾಡು ಎದುರು ನೋಡುತ್ತಿರುವುದಾಗಿ ಸ್ಟಾಲಿನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಮಲಾ ಹ್ಯಾರಿಸ್ ತಾಯಿ ಶ್ಯಾಮಲಾ ಗೋಪಾಲನ್ ಅವರ ಕುಟುಂಬವು ತಮಿಳುನಾಡಿನ ತಿರುವರೂರು ಜಿಲ್ಲೆಯ ತುಲಸೇಂತಿರಪುರಂ ಮತ್ತು ಪೈಂಗನಾಡು ಮೂಲದವರು. ಕಮಲಾ ಹ್ಯಾರಿಸ್ ಗೆಲುವು ಸಾಧಿಸುತ್ತಿದ್ದಂತೆ ಆ ಊರಿನಲ್ಲಿ ಸಡಗರ, ಸಂಭ್ರಮ ಮನೆ ಮಾಡುವ ಮೂಲಕ ವಿಜಯೋತ್ಸವ ಆಚರಿಸಲಾಯಿತು.

SCROLL FOR NEXT