ದೇಶ

ಬಿಹಾರದಲ್ಲಿ 5 ಸ್ಥಾನ ಗೆದ್ದ ಎಂಐಎಂ, ಈಗ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಚುನಾವಣೆಯತ್ತ ಒವೈಸಿ ಚಿತ್ತ

Lingaraj Badiger

ಹೈದರಾಬಾದ್: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೀಮಾಂಚಲ ಪ್ರದೇಶದಿಂದ ಐದು ಕ್ಷೇತ್ರಗಳನ್ನು ಗೆದ್ದಿರುವ, ಹೈದಾರಾಬಾದ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಖಿಲ ಭಾರತ ಮಜ್ಲಿಸ್‍ ಇ ಇತ್ತೆಹಾದ್‍-ಉಲ್‍ -ಮುಸ್ಲೀಮೀನ್ (ಎಐಎಂಐಎಂ) ಇದೀಗ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಚುನಾವಣೆಗಳತ್ತ ಗಮನ ಹರಿಸಿದೆ.

ಬಿಹಾರ ಚುನಾವಣಾ ಫಲಿತಾಂಶದ ಬಳಿಕ ಮಂಗಳವಾರ ರಾತ್ರಿ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸದುದ್ದೀನ್ ಒವೈಸಿ, ಇನ್ನು ಮುಂದೆ ‘ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶಾದ್ಯಂತ ಪ್ರತಿಯೊಂದು ಚುನಾವಣೆಗಳಲ್ಲಿ ನಾವು ಸ್ಪರ್ಧಿಸುತ್ತೇವೆ’ ಎಂದು ಹೇಳಿದ್ದಾರೆ.

ಪ್ರತಿ ರಾಜ್ಯದಲ್ಲೂ ಉಪಸ್ಥಿತಿಯೊಂದಿಗೆ ಎಐಎಂಐಎಂಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆಯುವ ಬಗ್ಗೆ ಸುಳಿವು ನೀಡಿದ ಒವೈಸಿ, ತಮ್ಮ ಪಕ್ಷವನ್ನು ವಿಸ್ತರಿಸುವುದಕ್ಕೆ ತಮಗೆ ಹಕ್ಕಿದೆ ಎಂದು ಹೇಳಿದ್ದಾರೆ.

‘2021 ರಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯುವ ನಮ್ಮ ಮುಂದಿನ ಹೆಜ್ಜೆಯಾಗಿದೆ. ಅಲ್ಲಿ ಪಕ್ಷ ಗೆಲ್ಲುವುದಕ್ಕಾಗಿ ಎಲ್ಲ ಯೋಜನೆಗಳನ್ನು ರೂಪಿಸಲಾಗುವುದು. ಪಶ್ಚಿಮ ಬಂಗಾಳ ಮುಸ್ಲಿಮರ ಹಿತಾಸಕ್ತಿಯನ್ನು ಪಕ್ಷ ಕಾಪಾಡಲಿದೆ.’ ಎಂದು ಒವೈಸಿ ಹೇಳಿದ್ದಾರೆ. 

"ಎಐಎಂಐಎಂ 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ನಾವು ಯಾರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂಬುದನ್ನು ಸಮಯವೇ ನಿರ್ಧರಿಸಲಿದೆ" ಎಂದು ಒವೈಸಿ ತಿಳಿಸಿದ್ದಾರೆ.

SCROLL FOR NEXT