ದೇಶ

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಪ್ರಚಾರದ ವೇಳೆ ಮರ ಬಿದ್ದು ಕಾಂಗ್ರೆಸ್ ಅಭ್ಯರ್ಥಿ ಸಾವು

Lingaraj Badiger

ತಿರುವನಂತಪುರಂ: ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಮರ ಬಿದ್ದು ಸಾವನ್ನಪ್ಪಿದ ಘಟನೆ ಕೇರಳದ ತಿರುವನಂತಪುರಂ ಜಿಲ್ಲೆಯ ಕರೋಡೆ ಪಂಚಾಯತ್‌ನ ಪುತಿಯ ಉಚಕ್ಕಡ ವಾರ್ಡ್‌ನಲ್ಲಿ ಬುಧವಾರ ನಡೆದಿದೆ.

ಮೃತ ಅಭ್ಯರ್ಥಿಯನ್ನು ವಲಿಯಾವಿಲಾದ ಬೆತೆಲ್ ನಿವಾಸ್ ನಿವಾಸಿ ಬಿನು ಅವರ ಪತ್ನಿ ಗಿರಿಜಾ ಕುಮಾರಿ(35) ಎಂದು ಗುರುತಿಸಲಾಗಿದೆ. ಗಿರಿಜಾ ಕುಮಾರಿ ಮಾಜಿ ಪಂಚಾಯತ್ ಸದಸ್ಯರಾಗಿದ್ದು, ಕರೋಡೆ ಪಂಚಾಯತ್‌ನ ಸಿಡಿಎಸ್ ಅಧ್ಯಕ್ಷರಾಗಿದ್ದರು.

ಘಟನೆಗೆ ಸಂಬಂಧಿಸಿದಂತೆ ಪೊಜಿಯೂರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಂದು ಬೆಳಗ್ಗೆ 11.45ರ ಸುಮಾರಿಗೆ ಗಿರಿಜಾ ಅವರು ಹತ್ತಿರದ ಪುಲ್ಲುವೆಟ್ಟಿ ಮೀನುಗಾರರ ಕಾಲೋನಿಯಲ್ಲಿ ಮತಯಾಚಿಸಿ ಪತಿ ಜತೆ ಬೈಕನ್ ನಲ್ಲಿ ವಾಪಸ್ ಬರುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುಲ್ಲುವೆಟ್ಟಿ ಬಳಿ ಕೆಲ ಕಾರ್ಮಿಕರು ಮರವನ್ನು ಕತ್ತರಿಸುತ್ತಿದ್ದ ವೇಳೆ ಮರದ ಒಂದು ಭಾಗ ಗಿರಿಜಾ ಅವರ ಮೇಲೆ ಬಿದ್ದಿದೆ. ಕತ್ತರಿಸುತ್ತಿದ್ದ ಮರದ ಭಾಗವನ್ನು ಹಗ್ಗದಿಂದ ಕಟ್ಟಿ ಹಿಡಿದಿದ್ದರೂ ನಿಯಂತ್ರಣಕ್ಕೆ ಬಾರದೇ ಕಾಂಗ್ರೆಸ್ ಅಭ್ಯರ್ಥಿ ಮೇಲೆ ಬಿದ್ದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಿರಿಜಾ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT