ದೇಶ

ದೀಪಾವಳಿಯಂದು ಸೈನಿಕರಿಗೆ ಕೃತಜ್ಞತೆ ಸಲ್ಲಿಸುವ ಸಂಕೇತವಾಗಿ ದೀಪಗಳನ್ನು ಬೆಳಗಿಸೋಣ: ಪ್ರಧಾನಿ ಮೋದಿ

Manjula VN

ನವದೆಹಲಿ; ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ದೇಶದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯಗಳನ್ನು ಕೋರಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮೋದಿಯವರು, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ. ಈ ಹಬ್ಬವು ಮತ್ತಷ್ಟು ಬೆಳಕು ಹಾಗೂ ಸಂತೋಷವನ್ನು ನೀಡಲಿ. ಎಲ್ಲರೂ ಸಮೃದ್ಧ ಹಾಗೂ ಆರೋಗ್ಯವಾಗಿರಲಿ ಎಂದು ಆಶಿಸುತ್ತೇನೆಂದು ಹೇಳಿದ್ದಾರೆ. 

ನಿನ್ನೆ ಕೂಡ ಟ್ವೀಟ್ ಮಾಡಿದ್ದ ಪ್ರಧಾನಮಂತ್ರಿಗಳು, ಈ ಬಾರಿ ದೀಪಾವಳಿ ಹಬ್ಬದ ದಿನದಂದು ದೇಶದ ಗಡಿ ಕಾಯುತ್ತಿರುವ ನಮ್ಮ ವೀರ ಯೋಧರಿಗೆ ಸೆಲ್ಯೂಟ್ ಹೊಡೆಯಲು ದೀಪಗಳನ್ನು ಬೆಳಗಿಸಿ ಎಂದು ತಿಳಿಸಿದ್ದರು. 

ಈ ಬಾರಿಯ ದೀಪಾವಳಿಯ ಹಬ್ಬದಂದು ನಮ್ಮ ಯೋಧರಿಗಾಗಿ ದೀಪವನ್ನು ಬೆಳಗಿಸೋಣ. ದೇಶವನ್ನು ನಿರ್ಭಯದಿಂದ ಕಾಯುತ್ತಿರುವ ನಮ್ಮ ವೀರ ಯೋಧರನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಗಡಿ ಕಾಯುತ್ತಿರುವ ಯೋಧರ ಕುಟುಂಬಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದಿದ್ದಾರೆ. ಟ್ವೀಟ್ ಜೊತೆಗೆ ಕೆಲ ದಿನಗಳ ಹಿಂದೆ ವೀರ ಯೋಧರಿಗೆ ದೀಪಾವಳಿ ಹಬ್ಬಂದು ದೀಪ ಬೆಳಗಿಸುವಂತೆ ಕರೆ ನೀಡಿದ್ದ ವಿಡಿಯೋವನ್ನು ಮೋದಿಯವರು ಹಂಚಿಕೊಂಡಿದ್ದಾರೆ. 

ಈ ಹಬ್ಬದ ಸಂದರ್ಭದಲ್ಲಿ ನಾವು ಗಡಿ ಕಾಯುತ್ತಿರುವ ಯೋಧರನ್ನು ನೆನಪಿಸಿಕೊಳ್ಳಬೇಕು. ಭಾರತ ಮಾತೆಗಾಗಿ ಸೇವೆ ಸಲ್ಲಿಸಿ, ರಕ್ಷಣೆ ನೀಡುತ್ತಿದ್ದಾರೆ. ಈ ವೀರ ಯೋಧರನ್ನು ನೆನಪಿಸಿಕೊಂಡ ಬಳಿಕ ನಾವು ದೀಪಾವಳಿ ಹಬ್ಬವನ್ನು ಆಚರಿಸಬೇಕು ಎಂದು ತಿಳಿಸಿದ್ದಾರೆ. 

SCROLL FOR NEXT