ದೇಶ

ಬಿಹಾರದಲ್ಲಿ ಎನ್​ಡಿಎ ಸರ್ಕಾರ: 7ನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್!

Vishwanath S

ಪಾಟ್ನಾ: ಬಿಹಾರದಲ್ಲಿ ಎನ್ ಡಿ ಎ ಮೈತ್ರಿಕೂಟದ ಶಾಸಕಾಂಗ ಪಕ್ಷದ ನಾಯಕನಾಗಿ ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಯ್ಕೆಯಾಗಿದ್ದು ಇದೀಗ ಏಳನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 

ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ನಡ್ಡಾ ಅವರ ಸಮ್ಮುಖದಲ್ಲಿ ನಿತೀಶ್ ಕುಮಾರ್ ಅವರು ಸತತ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಬಿಹಾರ ರಾಜ್ಯಪಾಲ ಫಗು ಚವಾಣ್ ಅವರು ಪ್ರತಿಜ್ಞಾ ವಿಧಿ ಭೋದಿಸಿದರು. 

ರಾಜಭವನದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಬಿಹಾರ ರಾಜ್ಯಪಾಲ ಫಗು ಚೌಹಾನ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಗೆ ಪ್ರಮಾಣ ವಚನ ಬೋಧಿಸಿದರು.

ಅವರೊಂದಿಗೆ ಬಿಜೆಪಿಯ ಕುಮಾರ್ ತಾರ್ ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ, ಜೆಡಿಯುನ ವಿಜಯ್ ಕುಮಾರ್ ಚೌಧರಿ, ಅಶೋಕ್ ಕುಮಾರ್ ಚೌಧರಿ, ವಿಜೇಂದ್ರ ಪ್ರಸಾದ್ ಯಾದವ್, ಮೇವಾ ಲಾಲ್ ಚೌಧರಿ, ಶೀಲಾ ಮಂಡಲ್ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಎನ್ ಡಿಎ ಒಕ್ಕೂಟದ ಇತರ ಪಕ್ಷಗಳಾದ ಹಿಂದೂಸ್ತಾನಿ ಅವಾಮಿ ಮೋರ್ಚಾದ ಸಂತೋಷ್ ಕುಮಾರ್ ಸುಮನ್ ಮತ್ತು ವಿಕಾಸ್ ಶೀಲ್ ಇನ್ಸಾನ್ ಪಕ್ಷದ ಮುಖೇಶ್ ಸಾಹ್ನಿ ಸಹ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ನಿರಾಶಾದಾಯಕ ಪ್ರದರ್ಶನ ನೀಡಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸ್ಥಾನ ಒಪ್ಪಿಕೊಳ್ಳಲು ಹಿಂದೇಟು ಹಾಕಿದ್ದರು. ಎನ್ ಡಿಎ ಪಕ್ಷಗಳ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿತೀಶ್ ಕುಮಾರ್ ಮನವೊಲಿಸಿ ಅಧಿಕಾರ ಚುಕ್ಕಾಣಿ ನೀಡಲು ನಿರ್ಧರಿಸಿದ್ದರು.

ಕೇಂದ್ರ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎನ್ ಡಿಎ ನಾಯಕರ ಮಹತ್ವದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನಾಗಿ ನಿತೀಶ್ ಕುಮಾರ್ ಅವರನ್ನು ಜೆಡಿಯು, ಬಿಜೆಪಿ, ಎಚ್ ಎ ಎಂ, ವಿಐಪಿ ಪಕ್ಷದ ಶಾಸಕರು ಆಯ್ಕೆ ಮಾಡಿದ್ದರು.

SCROLL FOR NEXT