ದೇಶ

ತಮಿಳುನಾಡು: ಕರುಣಾನಿಧಿ ಹಿರಿಯ ಪುತ್ರ ಎಂಕೆ ಅಳಗಿರಿಯಿಂದ ಹೊಸ ರಾಜಕೀಯ ಪಕ್ಷ ಸ್ಥಾಪನೆ ಸಾಧ್ಯತೆ?

Nagaraja AB

ಚೆನ್ನೈ: ದಕ್ಷಿಣ ತಮಿಳುನಾಡಿನಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಕರುಣಾನಿಧಿ ಅವರ ಹಿರಿಯ ಪುತ್ರ ಎಂಕೆ ಅಳಗಿರಿ ಹೊಸ ಪಕ್ಷ ಸ್ಥಾಪಿಸುವ ಸಾಧ್ಯತೆಯಿದೆ. ಆದರೆ, ಅವರನ್ನು ಮತ್ತೆ ಡಿಎಂಕೆಗೆ ಸೇರಿಸಿಕೊಳ್ಳಲಿದ್ದರೆ ಮಾತ್ರ ಹೊಸ ಪಕ್ಷ ಸ್ಥಾಪನೆಯತ್ತ ಚಿಂತನೆ ಮಾಡಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ. ಆದಾಗ್ಯೂ, ಬಿಜೆಪಿ ಜೊತೆಗಿನ ಸಂಬಂಧವನ್ನು ತಳ್ಳಿ ಹಾಕಿದ್ದಾರೆ.

69 ವರ್ಷದ ಎಂಕೆ ಅಳಗಿರಿ ಅವರನ್ನು  2014ರಲ್ಲಿ ಡಿಎಂಕೆ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಕ್ಕೆ ಮರು ಸೇರ್ಪಡೆಯಾಗಲು ಅಳಗಿರಿ ಬಯಸಿದ್ದು, ನವೆಂಬರ್ 23 ರಂದು ನಡೆಯಲಿರುವ ಡಿಎಂಕೆ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗುವ ನಿರ್ಧಾರದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅಳಗಿರಿಯ ಆಪ್ತ ಮೂಲಗಳು ತಿಳಿಸಿವೆ.

ಎಂಕೆ ಕರುಣಾನಿಧಿ ಮೃತಪಟ್ಟ ತಿಂಗಳಾವಧಿಯಲ್ಲೇ ಪಕ್ಷದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ್ದ ಎಂಕೆ ಅಳಗಿರಿ ಸೆಪ್ಟೆಂಬರ್ 5, 2018 ರಂದು ತನ್ನ ಬೆಂಬಲಿಗರೊಂದಿಗೆ ಚನ್ನೈನಲ್ಲಿ ಮೌನ ಮರವಣಿಗೆ ನಡೆಸಿದ್ದರು. ಆದಾಗ್ಯೂ, ತಾವು ಡಿಎಂಕೆ ಸೇರಲು ಸಿದ್ಧ, ಸ್ಟಾಲಿನ್ ಅವರನ್ನು ನಾಯಕನೆಂದು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದರು. 

ಎಂಕೆ. ಅಳಗಿರಿ ಕರುಣಾನಿಧಿ ಅವರ ಪುತ್ರನಾಗಿದ್ದು, ಬಿಜೆಪಿ ಸೇರುವ ಅಥವಾ ಆ ಪಕ್ಷದೊಂದಿಗೆ ಸಂಬಂಧ ಹೊಂದುವ ಯಾವುದೇ ಉದ್ದೇಶ ಹೊಂದಿಲ್ಲ. ಡಿಎಂಕೆ ನಾಯಕರ ನಿರ್ಧಾರವನ್ನು ಕಾಯಲಾಗುತ್ತಿದೆ. ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ ಎಂದು ಅವರ ಆಪ್ತರು ಹೇಳಿದ್ದಾರೆ. ಡಿಎಂಕೆಯಲ್ಲಿನ ಮೂಲಗಳು ಸಹ ಅಳಗಿರಿ ಮತ್ತೆ ಪಕ್ಷ ಸೇರುವ ವಿಶ್ವಾಸದಲ್ಲಿ ಅನೇಕ ಮುಖಂಡರು ಇರುವುದಾಗಿ ತಿಳಿಸಿವೆ.

SCROLL FOR NEXT